

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮೊದಲ ಕಾರ್ಯಕಾರಣಿ ಸಭೆಯು ನೂತನ ಅಧ್ಯಕ್ಷರಾದ ಶುಭದ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮೀಣ ಸಮಿತಿಯ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರು ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಶಾಲು ಹೊದಿಸಿ ಅಭಿನಂದಿಸಿದರು ಮತ್ತು ಕಾರ್ಯಚಟುವಟಿಕೆಗೆ ತೊಡಗಿಕೊಂಡು ಪಕ್ಷದ ಬಲವರ್ಧನೆಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಅವರು ಸಮಿತಿಯ ನೂತನ ಪದಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಿವರಿಸಿದರು.
ಹಿರಿಯ ಕಾನೂನು ತಜ್ಞ ಮತ್ತು ಕಾಂಗ್ರೆಸ್ ಮುಖಂಡ ಶೇಖರ ಮಡಿವಾಳ ಅವರು ಮಾತನಾಡಿ, “ಈ ದಿನಗಳಲ್ಲಿ ದೇಶದ ಸಂವಿಧಾನವು ಅಪಾಯ ಎದುರಿಸುತ್ತಿದೆ. ಸಂವಿಧಾನದಿಂದ ಮಾತ್ರ ದೇಶದ ಜನ ಸಾಮಾನ್ಯರಿಗೆ ಸಮಾನ ಹಕ್ಕುಗಳು ದೊರಕಿವೆ.ಈ ಶ್ರೇಷ್ಠ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ,” ಎಂದು ಹೇಳಿದರು.
ಈ ಸಭೆಯಲ್ಲಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ 3 ಬಾರಿ ಆಯ್ಕೆಯಾದ ಸದಸ್ಯ ಸುಂದರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಅವರು ಪಕ್ಷದ ಧ್ವಜವನ್ನು ಸ್ವೀಕರಿಸಿ ಸಂಘಟನೆಗೆ ಹೊಸ ಸಾಂದರ್ಭಿಕ ಶಕ್ತಿ ನೀಡಿದರು.
ಇತ್ತೀಚೆಗೆ ಆಯ್ಕೆಯಾದ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ ಹಿರ್ಗಾನ, ಕೃಷ್ಣ ಶೆಟ್ಟಿ ನಲ್ಲೂರು ಹಾಗೂ ಜಾನ್ ಆರ್ ಡಿ’ಸಿಲ್ವ ಅವರನ್ನು ಸ್ಮರಣಿಕೆ, ಫಲಪುಷ್ಪ ಹಾಗೂ ಶಾಲು ನೀಡಿ ಗೌರವಿಸಲಾಯಿತು.
ನಂತರ, ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರವರ್ತಕ ಅನಿಲ್ ಪೂಜಾರಿ ಮಾಳ ಅವರು ಸೊಸೈಟಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಡಾ. ಪ್ರೇಮದಾಸ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.