
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವಿಐಪಿ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಅತಿವೇಗವಾಗಿ ಬಂದ ಐಷಾರಾಮಿ ಲ್ಯಾಂಬೋರ್ಗಿನಿ ಕಾರೊಂದು ಮೃತ್ಯುವಿನಂತೆ ಅಪ್ಪಳಿಸಿದ್ದು, ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರೇವ್-3 ಮಾಲ್ ಬಳಿ ಸಂಭವಿಸಿದ ಈ ಭೀಕರ ಅಪಘಾತವು ಪ್ರಭಾವಿ ತಂಬಾಕು ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರ ಅತಿರೇಕದ ವೇಗಕ್ಕೆ ಸಾಕ್ಷಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ನಿಯಂತ್ರಣ ಕಳೆದುಕೊಂಡ ಈ ಸ್ಪೋರ್ಟ್ಸ್ ಕಾರು ಮೊದಲು ರಸ್ತೆಯಲ್ಲಿದ್ದ ಆಟೋ ರಿಕ್ಷಾಕ್ಕೆ ಗುದ್ದಿದೆ. ನಂತರ ನಿಂತಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಸುಮಾರು 10 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಕಾರು ಬೈಕನ್ನು ಅಡಿಯಲ್ಲಿ ಸಿಲುಕಿಸಿಕೊಂಡು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಯಮುನಾಗಂಜ್ ನಿವಾಸಿ ತೌಫಿಕ್ ಎಂಬುವವರು ಈ ಘಟನೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಉಳಿದ ಐವರು ಮೂಳೆ ಮುರಿತದಂತಹ ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಆಕ್ರೋಶದಿಂದ ಕಾರನ್ನು ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಆರೋಪಿಯ ಜೊತೆಯಲ್ಲಿದ್ದ ಖಾಸಗಿ ಬೌನ್ಸರ್‌ಗಳು ಗಾಯಾಳುಗಳಿಗೆ ನೆರವಾಗುವ ಬದಲು ಸಾರ್ವಜನಿಕರ ಮೇಲೆ ದರ್ಪ ತೋರಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಐಷಾರಾಮಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಭಾವಿ ಉದ್ಯಮಿಯ ಪುತ್ರನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.



































