
ಹೆಬ್ರಿ : ನೆಲ, ಜಲ, ನಾಡು, ನುಡಿ, ಶ್ರೀಮಂತ ಸಂಸ್ಕೃತಿ ಪರಂಪರೆಯ ಆಸ್ಮಿತೆಯ ಕನ್ನಡ ಭಾಷೆಯು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು. ಇತಿಹಾಸವನ್ನು ಓದಿದಾಗ, ಕನ್ನಡ ಭಾಷಿಕ ರಾಜರ ಆಡಳಿತದ ವ್ಯವಹಾರವು ಗಡಿದಾಟಿ ಬಹು ಪ್ರಾಚೀನ ಮೆಸಪಟೋಮಿಯಾ ನಾಗರೀಕತೆಯ ಕಾಲದಲ್ಲೂಇತ್ತು ಎಂಬುದು ವೇದ್ಯವಾಗುತ್ತದೆ. ಅಲ್ಲಿನ ಉತ್ಕನನಗಳಲ್ಲಿ ಪುರಾವೆ ಇದೆ. ಕರ್ನಾಟಕದ ಈ ಪುಣ್ಯ ಮಣ್ಣಿನಲ್ಲಿ ನಮ್ಮ ಜನ್ಮವಾಗಿದೆ. ನಮ್ಮ ಮಾತೃಭಾಷೆ ಕನ್ನಡ. ಕನ್ನಡ ಹೃದಯದ ಭಾಷೆಯಾದಾಗ ಕನ್ನಡದ ಸಂಸ್ಕೃತಿ ಪರಂಪರೆಗಳು ಹೃದ್ಯವಾಗುತ್ತದೆ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ಅವರು ತಮ್ಮ ಶಾಲೆ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆ ಮುದ್ರಾಡಿಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಶುಭ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ದೇವಿಗೆ ದೀಪ ಬೆಳಗಿಸಿ , ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಾಡು-ನುಡಿಯ ಕುರಿತಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಮತ್ತು ಕನ್ನಡ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಸಜನ್, ಸುಬ್ರಹ್ಮಣ್ಯ, ಕೌಶಿಕ್, ರೇಷ್ಮಾ, ಪ್ರತೀಕ್ಷಾ ಮತ್ತು ಆಯುಷ್ಯಾರಿಗೆ ಬಹುಮಾನ ವಿತರಿಸಲಾಯಿತು.
ಹತ್ತನೆ ತರಗತಿ ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿ, ಮಣಿಕಂಠ ವಂದಿಸಿದರು. ಶಿಕ್ಷಕ ಮಹೇಶ ನಾಯ್ಕ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಆನಂದ ಪಿ. ವಿ, ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಮಹೇಶ ಎಂ. ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.



































