
ಬೆಂಗಳೂರು: ನಟಿ ಮೇಲೆ ಲೈಂಗಿಕ ಕಿರುಕುಳ ಮತ್ತು ವಂಚನೆ ಆರೋಪ ಪ್ರಕರಣದಿಂದಾಗಿ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ ನಟ ಮಡೆನೂರು ಮನು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಈ ಬೆಳವಣಿಗೆಯು ಸಿನಿಮಾ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ, ಮನು ಜೈಲಿನಲ್ಲಿ ಇರುವಾಗ ಚಿತ್ರರಂಗದ ಸ್ಟಾರ್ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಆಡಿಯೋ ವೈರಲ್ ಆದ ನಂತರ ಅಭಿಮಾನಿಗಳು ಮತ್ತು ಚಿತ್ರರಂಗದ ಹಲವು ಮಂದಿ ಮನು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಪರಿಣಾಮವಾಗಿ ಚಿತ್ರರಂಗವು ಅವರ ಮೇಲೆ ಅನೌಪಚಾರಿಕ ನಿರ್ಬಂಧವನ್ನೂ ಹೇರಿತ್ತು.
ವೈರಲ್ ಆಡಿಯೋ ಕುರಿತು ಪ್ರತಿಕ್ರಿಯಿಸಿರುವ ಮನು, “ಆ ಆಡಿಯೋ ನನ್ನದಲ್ಲ, ಆದರೆ ಅದರಿಂದ ಶಿವರಾಜ್‌ಕುಮಾರ್ ಅವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ” ಎಂದು ಹೇಳುತ್ತಾ ಬಂದಿದ್ದರು. ಇದಕ್ಕಾಗಿ ಶಿವಣ್ಣ ಅವರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಆದರೆ, ಶಿವರಾಜ್‌ಕುಮಾರ್ ಅವರು ಕಂಠೀರವ ಸ್ಟುಡಿಯೋಗೆ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಮನು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಶಿವಣ್ಣ ಅವರನ್ನು ಭೇಟಿಯಾದ ಮನು ಅವರ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ. ಈ ಕ್ಷಣದ ವಿಡಿಯೋವನ್ನು ಮನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, “ಅಂತೂ ಒಂದು ಕೆಟ್ಟ ಗಳಿಗೆಯನ್ನು ದಾಟಿ, ಕೊನೆಗೂ ಶಿವಣ್ಣ ನನ್ನನ್ನು ಆಶೀರ್ವಾದ ಮಾಡಿದರು. ಜೈ ಶಿವಣ್ಣ, ಜೈ ದರ್ಶನ್ ಸರ್, ಜೈ ಧ್ರುವಣ್ಣ. ಯಾವತ್ತೂ ನಿಮಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ” ಎಂದು ಬರೆದುಕೊಂಡಿದ್ದಾರೆ.