
ರಾಮನಗರ/ಕನಕಪುರ: ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಪರಿಚಯ ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿ ಮನೆ ಬಿಟ್ಟು ಬಂದಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು, ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ ಎಂಬ ಅನುಮಾನದಿಂದ ಅಪ್ರಾಪ್ತ ಬಾಲಕ ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಘಟನೆ ಜುಲೈ 10 ರಂದು ನಡೆದಿದ್ದರೂ, ಹಲವು ದಿನಗಳ ನಂತರ ಪೊಲೀಸ್ ತನಿಖೆಯಲ್ಲಿ ಸತ್ಯ ಹೊರಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಸಂಘರ್ಷ ಎದುರಿಸುತ್ತಿರುವ ಬಾಲಕನನ್ನು ಬಾಲನ್ಯಾಯ ಮಂಡಳಿಯ ವಶಕ್ಕೆ ಒಪ್ಪಿಸಲಾಗಿದ್ದು, ಶವವನ್ನು ಮರೆಮಾಚಲು ಸಹಕರಿಸಿದ ಆರೋಪದಡಿ ಬಾಲಕನ ಅಣ್ಣ ಪುಟ್ಟಮಾದು ಹಾಗೂ ಚಿಕ್ಕಪ್ಪ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಅಂಶಗಳು
- ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
- ಜುಲೈ 10 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ.
- ಇನ್‌ಸ್ಟಾಗ್ರಾಂ ಪರಿಚಯದಿಂದ ಆರಂಭವಾದ ಸ್ನೇಹ ಪ್ರೀತಿಗೆ ತಿರುಗಿತ್ತು.
- ಅನುಮಾನದಿಂದ ಅಪ್ರಾಪ್ತ ಬಾಲಕ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ.
- ಶವವನ್ನು ಮನೆ ಸಮೀಪದ ಜಮೀನಿನಲ್ಲಿ ಹೂತು ಹಾಕಿದ ಆರೋಪ.
- ಬಾಲಕನ ಅಣ್ಣ ಹಾಗೂ ಚಿಕ್ಕಪ್ಪ ಬಂಧನ.
- ಕೃತ್ಯಕ್ಕೆ ಬಳಸಿದ ಹಳೆಯ ಬಂದೂಕು ವಶಕ್ಕೆ.
ಇನ್‌ಸ್ಟಾಗ್ರಾಂ ಪರಿಚಯದಿಂದ ಆರಂಭವಾದ ಪ್ರೇಮ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳಾಗಿದ್ದ ಇಬ್ಬರು ಅಪ್ರಾಪ್ತರ ನಡುವೆ ಸುಮಾರು 2 ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿದ್ದು, ಸುಮಾರು 1 ತಿಂಗಳ ಹಿಂದೆ ಬಾಲಕಿ ಸ್ನೇಹಿತೆಯ ಮನೆಗೆ ತೆರಳುವುದಾಗಿ ಹೇಳಿ ಪ್ರಿಯಕರನ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಕೆಲ ದಿನಗಳಿಂದ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ವೇಳೆ, ಬಾಲಕಿ ಮತ್ತೊಬ್ಬ ಯುವಕನೊಂದಿಗೆ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದಾಳೆ ಎಂಬ ಅನುಮಾನ ಬಾಲಕನಿಗೆ ಮೂಡಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ಬಾಲಕ ಮನೆಯಲ್ಲಿದ್ದ ಹಳೆಯ ನಾಡ ಬಂದೂಕನ್ನು ತೆಗೆದುಕೊಂಡು ಬಾಲಕಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶವವನ್ನು ಮರೆಮಾಚಿದ ಆರೋಪ
ಗುಂಡೇಟಿನಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಮನೆ ಸಮೀಪದ ಜಮೀನಿನಲ್ಲಿ ಹೂತು ಹಾಕಲಾಗಿದೆ. ಈ ಕೃತ್ಯದಲ್ಲಿ ಬಾಲಕನ ಅಣ್ಣ ಹಾಗೂ ಚಿಕ್ಕಪ್ಪ ಸಹಕರಿಸಿದ್ದಾರೆ ಎಂಬ ಆರೋಪದಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದಲ್ಲಿ ಹರಿದಾಡಿದ ಅನುಮಾನವೇ ಪ್ರಕರಣ ಬಯಲು
ಬಾಲಕಿ ಹಲವು ದಿನಗಳಿಂದ ಕಾಣೆಯಾಗಿರುವುದು ಹಾಗೂ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಮಾತು ಗ್ರಾಮದಲ್ಲಿ ಹರಿದಾಡುತ್ತಿತ್ತು. ಈ ಮಾಹಿತಿ ಕೋಡಿಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯ ಗಮನಕ್ಕೆ ಬಂದ ಬಳಿಕ ತನಿಖೆ ಆರಂಭಿಸಲಾಯಿತು.
ಪೊಲೀಸರು ಗ್ರಾಮಕ್ಕೆ ತೆರಳಿ ಬಾಲಕ ಮತ್ತು ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಹೊರಬಂದಿದೆ. ನಂತರ ಜಮೀನಿನಲ್ಲಿ ಹೂತು ಹಾಕಿದ್ದ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಹಳೆಯ ನಾಡ ಬಂದೂಕನ್ನು ಮನೆ ಸಮೀಪದ ಮೆದೆಯಲ್ಲಿ ಬಚ್ಚಿಟ್ಟಿದ್ದ ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರಿದಿದೆ
ಪ್ರಕರಣದ ಕುರಿತು ಕೋಡಿಹಳ್ಳಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಹತ್ಯೆಗೆ ಕಾರಣವಾದ ಪರಿಸ್ಥಿತಿ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಕಾನೂನಿನ ಸಂಘರ್ಷ ಎದುರಿಸುತ್ತಿರುವ ಅಪ್ರಾಪ್ತ ಬಾಲಕನ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತಿದೆ.



































