
ಕಲಬುರಗಿ: ರಾಜ್ಯದ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತ ಕಾಪಾಡಲು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಅವರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗದ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರ ಬರೆದಿದ್ದು, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕಡಿಮೆ ಅಥವಾ ಯಾವುದೇ ಕಾರ್ಯಭಾರ ಹೊಂದಿರದ ಉಪನ್ಯಾಸಕರ ವಿವರಗಳನ್ನು ಆಗಸ್ಟ್ 30, 2025ರೊಳಗೆ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ, ಅಂತಹ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ರಾಜ್ಯಾದ್ಯಂತ ಉಪನ್ಯಾಸಕರಲ್ಲಿ ಆತಂಕ ಸೃಷ್ಟಿಸಿದೆ ಎಂದು ಶಶೀಲ್ ಜಿ. ನಮೋಶಿ ತಿಳಿಸಿದ್ದಾರೆ.
ಈ ರೀತಿಯ ನಿರ್ಧಾರಗಳು ಉಪನ್ಯಾಸಕರಲ್ಲಿ ಮಾನಸಿಕ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗುತ್ತವೆ. ಇದರಿಂದ ಅವರ ಬೋಧನಾ ಗುಣಮಟ್ಟದ ಮೇಲೆ ಪರಿಣಾಮ ಬೀರಿ, ರಾಜ್ಯದ ಪಿಯುಸಿ ಫಲಿತಾಂಶ ಕುಸಿಯುವ ಸಾಧ್ಯತೆ ಇದೆ. ಸಚಿವರಾದ ಮಧು ಬಂಗಾರಪ್ಪ ಅವರು ಈಗಾಗಲೇ ರಾಜ್ಯದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇಲಾಖೆಯ ಅಧಿಕಾರಿಗಳು ಹೊರಡಿಸುತ್ತಿರುವ ಈ ರೀತಿಯ ಪತ್ರಗಳು ಸರ್ಕಾರದ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡಬಹುದು ಎಂದು ನಮೋಶಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದಿರುವುದರಿಂದ ಪದವಿಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಪರಿಣಾಮವಾಗಿ, ಅನೇಕ ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರ ಕಾರ್ಯಭಾರ ಕೊರತೆ ಉಂಟಾಗಿರುವುದು ಸಾರ್ವಜನಿಕವಾಗಿ ತಿಳಿದಿರುವ ವಿಷಯ. ಈ ಹಿಂದೆ, ಮಧು ಬಂಗಾರಪ್ಪ ಅವರು ಸ್ವತಃ “ವಿಮುಕ್ತಿ” ಎಂಬ ಪದವನ್ನು ತೆಗೆದು ಅನುದಾನಿತ ನೌಕರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದರು. ಅಲ್ಲದೆ, ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಅನುದಾನಿತ ಶಿಕ್ಷಕರ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದರು ಎಂದು ನಮೋಶಿ ನೆನಪಿಸಿದ್ದಾರೆ.
ಆದರೆ, ಏಕಾಏಕಿ ಇಲಾಖೆಯ ಅಧಿಕಾರಿಗಳು ಇಂತಹ ಪತ್ರಗಳನ್ನು ಹೊರಡಿಸುವುದು ಉಪನ್ಯಾಸಕರಲ್ಲಿ ಗೊಂದಲ ಮೂಡಿಸುತ್ತದೆ. ಆದ್ದರಿಂದ, ಅಧಿಕಾರಿಗಳು ಹೊರಡಿಸಿರುವ ಈ ಪತ್ರವನ್ನು ತಕ್ಷಣ ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಕಾರ್ಯಭಾರ ಕೊರತೆ ಇರುವ ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳು ಅಥವಾ ವಸತಿ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜಿಸುವ ಮೂಲಕ ಅವರ ಕಾರ್ಯಭಾರವನ್ನು ಸರಿದೂಗಿಸಬೇಕು. ಈ ವರ್ಷದ ಫಲಿತಾಂಶ ಕುಸಿತದಿಂದಾಗಿ ಉಂಟಾಗಿರುವ ಕಾರ್ಯಭಾರ ಕೊರತೆಗೆ ಯಾವುದೇ ಉಪನ್ಯಾಸಕರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಶಶೀಲ್ ಜಿ. ನಮೋಶಿ ಅವರು ಸಚಿವರಲ್ಲಿ ಒತ್ತಾಯಿಸಿದ್ದಾರೆ.