
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಕಳೆದ 3 ತಿಂಗಳಿಂದ ಸಂಬಳ ಪಾವತಿಯಾಗದ ಕಾರಣಕ್ಕೆ ಮನನೊಂದ ಗ್ರಂಥಪಾಲಕಿಯೊಬ್ಬರು ಡೆತ್ ನೋಟ್ ಬರೆದಿಟ್ಟು ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ.
ಮೃತರನ್ನು ಮಳಖೇಡದ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ (38) ಎಂದು ಗುರುತಿಸಲಾಗಿದೆ. ಅವರು ಗ್ರಂಥಾಲಯದ ಆವರಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ವಿವರ:
ಭಾಗ್ಯವತಿ ಅವರು ಗ್ರಂಥಾಲಯ ಇಲಾಖೆಯಲ್ಲಿ ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಅವರಿಗೆ ಸಕಾಲದಲ್ಲಿ ವೇತನ ಪಾವತಿಯಾಗುತ್ತಿರಲಿಲ್ಲ. ಇದರಿಂದಾಗಿ ಅವರು ಸಾಲ ಮಾಡುವ ಪರಿಸ್ಥಿತಿ ಬಂದಿತ್ತು. ಸಾಲಗಾರರ ಕಾಟ ಮತ್ತು ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಡೆತ್ ನೋಟ್‌ನಲ್ಲಿ ಹೇಳಿದ್ದೇನು?:
ತಮ್ಮ ಅಂತಿಮ ನಿರ್ಧಾರಕ್ಕೆ ಕಾರಣವಾದ ನೋವು ಮತ್ತು ಆಕ್ರೋಶವನ್ನು ಭಾಗ್ಯವತಿ ಅವರು ಡೆತ್ ನೋಟ್‌ನಲ್ಲಿ ದಾಖಲಿಸಿದ್ದಾರೆ. “ಸಕಾಲಕ್ಕೆ ಸಂಬಳ ನೀಡದ ಕಾರಣ ನಾನು ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಸಾಲ ತೀರಿಸಲಾಗದೆ, ಮಕ್ಕಳ ಫೀಸ್ ಕಟ್ಟಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ವೇತನ ಕೇಳಲು ಅಧಿಕಾರಿಗಳ ಬಳಿ ಹೋದಾಗ ಅವರು ನನ್ನನ್ನು ಕೀಳಾಗಿ ಕಾಣುತ್ತಿದ್ದರು. ಸಂಬಂಧಪಟ್ಟ ಅಧಿಕಾರಿಗಳ ಕೈ ಕಾಲು ಹಿಡಿದರೂ ಯಾರೂ ಕರುಣೆ ತೋರಲಿಲ್ಲ” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
“ನನ್ನ ಈ ದುಸ್ಥಿತಿ ಬೇರೆ ಯಾವುದೇ ಗ್ರಂಥಪಾಲಕರಿಗೆ ಬರಬಾರದು. ಅದಕ್ಕಾಗಿಯೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಬರೆದಿದ್ದಾರೆ. ಇವರ ಆತ್ಮಹತ್ಯೆಯು ಸರ್ಕಾರಿ ನೌಕರರ ವೇತನ ವಿಳಂಬದ ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿದಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.