
ಕಲಬುರ್ಗಿ: ಕಲಬುರ್ಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಆರ್. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ. ಭಾರತಿ ಹರಸೂರ ಮತ್ತು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಶ್ರೀದೇವಿ ಸೋಮ್ ಭಾಗವಹಿಸಿದ್ದರು.
ಮುಖ್ಯ ಗ್ರಂಥಪಾಲಕರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಡಾ. ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದರು. “ದೇಶದ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗಗಳನ್ನು ಆರಂಭಿಸಲು ರಂಗನಾಥನ್ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ” ಎಂದು ಅವರು ಹೇಳಿದರು.
ಡಾ. ಭಾರತಿ ಹರಸೂರ ಅವರು, ಗ್ರಂಥಾಲಯದಲ್ಲಿರುವ ಸಂಪನ್ಮೂಲಗಳ ಬಗ್ಗೆ ಮಾತನಾಡಿದರು. “ನಮ್ಮ ಕಾಲೇಜಿನ ಗ್ರಂಥಾಲಯ ಸಿಬ್ಬಂದಿ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ ಮುದ್ರಿತ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ” ಎಂದು ಅವರು ತಿಳಿಸಿದರು.
ಡಾ. ಶ್ರೀದೇವಿ ಸೋಮ್ ಅವರು, ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಗೆ ಮತ್ತು ಗ್ರಂಥಾಲಯ ಶಿಕ್ಷಣವನ್ನು ಜನಪ್ರಿಯಗೊಳಿಸುವಲ್ಲಿ ಡಾ. ರಂಗನಾಥನ್ ಅವರ ಪಾತ್ರ ಅನನ್ಯವಾದುದು ಎಂದು ಪ್ರಶಂಸಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲ ಡಾ. ಎಸ್.ಆರ್. ಪಾಟೀಲ್, “ಕಾಲೇಜುಗಳಲ್ಲಿ ಗ್ರಂಥಾಲಯಗಳು ಜ್ಞಾನಾರ್ಜನೆಗೆ ಅತ್ಯಂತ ಮಹತ್ವದ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾಹಿತಿಯನ್ನು ತ್ವರಿತವಾಗಿ ಒದಗಿಸುವುದು ಗ್ರಂಥಾಲಯದ ಕರ್ತವ್ಯವಾಗಿದೆ” ಎಂದು ಹೇಳಿದರು. ಅಲ್ಲದೆ, ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಮುದ್ರಿತ ಮತ್ತು ಡಿಜಿಟಲ್ ಪುಸ್ತಕಗಳನ್ನು ಖರೀದಿಸಲು ಗ್ರಂಥಾಲಯಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮವನ್ನು ಗ್ರಂಥಪಾಲಕ ಡಾ. ಸಾವಿತ್ರಿ ಪಟ್ಟಣ ನಿರೂಪಿಸಿದರು ಮತ್ತು ಡಾ. ಮಮತಾ ಮೇಳಕುಂದಿ ವಂದನಾರ್ಪಣೆ ಮಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಗ್ರಂಥಾಲಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.