
ಕಲಬುರಗಿ, ಫೆಬ್ರವರಿ 5: ಮಕ್ಕಳ ಪೌಷ್ಟಿಕಾಹಾರದ ಯೋಜನೆಯಲ್ಲೂ ಭ್ರಷ್ಟಾಚಾರ ಎಸಗುತ್ತಿದ್ದ ಕಳಂಕಿತ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಗರದ ಸ್ಟೇಷನ್ ಬಜಾರ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಸಾರ್ವಜನಿಕ ಹಣವನ್ನು ಬಿಡುಗಡೆ ಮಾಡಲು ಲಂಚದ ಬೇಡಿಕೆ ಇಟ್ಟು ಈಗ ಜೈಲು ಪಾಲಾಗಿದ್ದಾರೆ.
ಘಟನೆಯ ವಿವರ:
ನಗರದ ಸ್ಟೇಷನ್ ಬಜಾರ್ ಅಂಗನವಾಡಿ ಕಾರ್ಯಕರ್ತೆ ಹೀನಾ ಹಾಗೂ ಅಲ್ಲಿನ ಮೇಲ್ವಿಚಾರಕಿಯಾಗಿರುವ ಪಿಂಕುಬಾಯಿ ಗಾಯಕವಾಡ ಬಂಧಿತ ಆರೋಪಿಗಳಾಗಿದ್ದಾರೆ. ಉದಯ ನಗರದ ಅಂಗನವಾಡಿ ಕಾರ್ಯಕರ್ತೆಯಾದ ಸೌಭಾಗ್ಯ ಬಲಭೀಮ ರಾಠೋಡ ಎಂಬುವವರು ನೀಡಿದ ದೂರಿನ ಅನ್ವಯ ಈ ಕಾರ್ಯಾಚರಣೆ ನಡೆದಿದೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದೇಕೆ?:
ದೂರುದಾರರ ಅಂಗನವಾಡಿ ಕೇಂದ್ರಕ್ಕೆ ಸರ್ಕಾರದಿಂದ ಒಟ್ಟು 14,490 ರೂಪಾಯಿಗಳ ಮೊಟ್ಟೆ ಹಣ ಮಂಜೂರಾಗಿತ್ತು. ಈ ಮೊತ್ತವನ್ನು ಬಿಡುಗಡೆ ಮಾಡಲು ಆರೋಪಿಗಳು ಕಮಿಷನ್ ರೂಪದಲ್ಲಿ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
- ಒಂದು ತಿಂಗಳ ಮೊಟ್ಟೆ ಹಣದ ಪೈಕಿ 4,830 ರೂಪಾಯಿ.
- ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ತಲಾ 600 ರೂಪಾಯಿಯಂತೆ ಒಟ್ಟು 1,200 ರೂಪಾಯಿ.ಹೀಗೆ ಒಟ್ಟು 6,030 ರೂಪಾಯಿಗಳನ್ನು ಲಂಚವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ:
ಲೋಕಾಯುಕ್ತ ಎಸ್ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್ ರಾಜಶೇಖರ ಬಡದೆಸಾರ ನೇತೃತ್ವದ ತಂಡವು ಈ ಯಶಸ್ವಿ ದಾಳಿ ಸಂಘಟಿಸಿತ್ತು. ಸದ್ಯ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



































