
ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮನೆಗೆ ಕಳ್ಳರು ಕನ್ನ ಹಾಕಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ನ್ಯಾಯಾಧೀಶ ಸಚಿನ್ ಕೌಶಿಕ್ ಅವರು ಶನಿವಾರ ಮತ್ತು ಭಾನುವಾರದ ರಜೆಯ ಕಾರಣ ಕುಟುಂಬ ಸಮೇತ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ನ್ಯಾಯಾಧೀಶರ ಮನೆಗೆ ಹಾಕಿದ್ದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಟ್ರೇಜರಿ, ದೇವರ ಕೋಣೆ ಹಾಗೂ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ದರೋಡೆ ನಡೆಸಿದ್ದಾರೆ.
ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬಹಿರಂಗಗೊಂಡಿದೆ. ವಿಷಯದ ಗಂಭೀರತೆ ಅರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಎಸ್‌ಪಿ ಬಲ್ಲಪ್ಪ ನಂದಗಾಂವಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ್ಯಾಯಾಧೀಶರು ವಾಪಸ್ ಬಂದ ನಂತರ, ಕಳವಾಗಿರುವ ವಸ್ತುಗಳ ನಿಖರ ಮಾಹಿತಿ ಲಭ್ಯವಾದ ಬಳಿಕ ಪ್ರಕರಣ ದಾಖಲಾಗಲಿದೆ.
ಸ್ಥಳೀಯರ ಆಕ್ರೋಶ
ಈ ಬಡಾವಣೆ ಶಾಸಕರು ಮತ್ತು ಉನ್ನತ ಅಧಿಕಾರಿಗಳು ವಾಸವಾಗಿರುವ ಪ್ರದೇಶವಾಗಿದ್ದರೂ, ಇಲ್ಲಿ ಸರಿಯಾದ ಬೀದಿ ದೀಪಗಳಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೂಡ ನಿಷ್ಕ್ರಿಯವಾಗಿವೆ. ಪೊಲೀಸರು ಗಸ್ತು ತಿರುಗುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಅವರು ದೂರಿದ್ದಾರೆ.