
ಬೆಂಗಳೂರು: ನೆಟ್‌ವರ್ಕ್ 18 ಸಂಸ್ಥೆಯ ಕನ್ನಡ ಯೂಟ್ಯೂಬ್ ವಿಭಾಗದ ಮುಖ್ಯಸ್ಥರಾಗಿದ್ದ ಯುವ ಪತ್ರಕರ್ತ ಶ್ರೇಯಸ್ ಆರ್ (41) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಾನುವಾರ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ (ಸೋಮವಾರ) ರಾತ್ರಿ 10 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಶ್ರೇಯಸ್ ಮೃತಪಟ್ಟಿದ್ದಾರೆ.
ಶ್ರೇಯಸ್ ಅವರು ಪತ್ನಿ ಹಾಗೂ 9 ವರ್ಷದ ಮಗುವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ನೆಟ್‌ವರ್ಕ್ 18 ಹಾಗೂ ನ್ಯೂಸ್ 18 ಕನ್ನಡ ಬಳಗ ತೀವ್ರ ಕಂಬನಿ ಮಿಡಿದಿದೆ.
ತಂದೆಯ ನಿಧನದ ಬೆನ್ನಲ್ಲೇ ದುರಂತ
ಶ್ರೇಯಸ್ ಆರ್ ಅವರ ತಂದೆ ರಘುರಾಂ ಅವರು ಸಹ ಇದೇ ವರ್ಷ ಜುಲೈ 14ರಂದು ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ನಿಧನರಾಗಿದ್ದರು. ತಂದೆಯ ನಿಧನದ ದುಃಖದಿಂದ ಚೇತರಿಸಿಕೊಳ್ಳುವ ಮುನ್ನವೇ ಶ್ರೇಯಸ್ ಆರ್ ಅವರು ನಿಧನರಾಗಿರುವುದು ಕುಟುಂಬ ಮತ್ತು ಮಾಧ್ಯಮ ವಲಯಕ್ಕೆ ಆಘಾತ ತಂದಿದೆ.
ಇದಲ್ಲದೆ, ಶ್ರೇಯಸ್ ಆರ್ ಅವರು ಕನ್ನಡದ ದಿವಂಗತ ನಟ ನವೀನ್ ಮಯೂರ್ (‘ಸ್ಪರ್ಶ’ ಖ್ಯಾತಿ) ಅವರ ಸಹೋದರ ಆಗಿದ್ದಾರೆ. ನವೀನ್ ಮಯೂರ್ ಅವರು 2010ರಲ್ಲಿ ಜಾಂಡೀಸ್ ಕಾಯಿಲೆಯಿಂದ ಬಳಲಿ ನಿಧನರಾಗಿದ್ದರು.
ಮಾಧ್ಯಮ ಅಕಾಡೆಮಿ ಫೆಲೋಶಿಪ್‌ಗೆ ಆಯ್ಕೆ
ಶ್ರೇಯಸ್ ಆರ್ ಅವರು ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಫೆಲೋಶಿಪ್ ಯೋಜನೆಗೆ ಆಯ್ಕೆಯಾಗಿದ್ದರು.