
ಲಕ್ನೋ: ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಸೇನಾಪಡೆಯ ವೈದ್ಯರೊಬ್ಬರು ಹೈದರಾಬಾದ್ ರೈಲಿಗಾಗಿ ಕಾಯುತ್ತಿದ್ದಾಗ, ಸಮಯಕ್ಕೆ ಸರಿಯಾಗಿ ನೆರವಿಗೆ ಧಾವಿಸಿ, ಸ್ಥಳದಲ್ಲೇ ಹೆರಿಗೆ ಮಾಡಿಸಿದ ಸಿನಿಮೀಯ ಘಟನೆ ನಡೆದಿದೆ.
‘ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್’ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವು ತಾಳಲಾರದೆ ಅವರು ಝಾನ್ಸಿ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾರೆ. ಅವರ ಪರಿಸ್ಥಿತಿ ಗಮನಿಸಿದ ರೈಲ್ವೆ ಮಹಿಳಾ ಸಿಬ್ಬಂದಿ ಕೂಡಲೇ ಸಹಾಯಕ್ಕೆ ಧಾವಿಸಿ, ಅವರನ್ನು ವೀಲ್‌ಚೇರ್‌ನಲ್ಲಿ ಕರೆದೊಯ್ಯುತ್ತಿದ್ದರು.
ಅದೇ ಸಮಯದಲ್ಲಿ, ಹೈದರಾಬಾದ್ ರೈಲಿಗಾಗಿ ಕಾಯುತ್ತಿದ್ದ ಸೇನಾ ವೈದ್ಯ ಮೇಜರ್ ಡಾ. ರೋಹಿತ್ ಬಚ್‌ವಾಲಾ ಅವರು ಈ ದೃಶ್ಯವನ್ನು ಗಮನಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಅರಿತ ಅವರು ತಕ್ಷಣವೇ ಗರ್ಭಿಣಿಯ ನೆರವಿಗೆ ಧಾವಿಸಿದ್ದಾರೆ. ಸ್ಥಳದಲ್ಲಿ ಲಭ್ಯವಿದ್ದ ಪುಟ್ಟ ಚಾಕು ಮತ್ತು ಹೇರ್‌ಪಿನ್‌ನಂತಹ ವಸ್ತುಗಳನ್ನು ಬಳಸಿ, ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಜೀವವನ್ನು ಉಳಿಸಿದ್ದಾರೆ. ಹೆರಿಗೆಯ ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.