
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ಈ ಕುರಿತು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ತಮ್ಮ ಸಂಪೂರ್ಣ ಬೆಂಬವಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಂಗಳವಾರ ಹೇಳಿದ್ದಾರೆ.
“ಇದೊಂದು ರಾಷ್ಟ್ರದ ಭದ್ರತಾ ವಿಷಯವಾಗಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕು,” ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ, ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ತಯಾರಿ ಮಾಡುತ್ತಿದೆ. ಪಾಕಿಸ್ತಾನದ ಬೆಂಬಲದೊಂದಿಗೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಸರ್ಕಾರದ ಹತ್ತಿರ ಇದೆ ಎಂದು ದೇವೇಗೌಡರು ತಿಳಿಸಿದ್ದಾರೆ.
“ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿಲ್ಲ. ಆದರೆ ಅದು ಅಗತ್ಯವಿಲ್ಲ. ಅನಿವಾರ್ಯ ಎನಿಸಿದರೆ ನಾನೇ ಪತ್ರ ಬರೆಯುತ್ತೇನೆ. ನಾನು ಈಗಾಗಲೇ ಹಲವು ಬಾರಿ ಪತ್ರ ಬರೆದಿದ್ದೇನೆ, ಮುಂದೆಯೂ ಬರೆಯುತ್ತೇನೆ,” ಎಂದು ದೇವೇಗೌಡರು ಹೇಳಿದ್ದಾರೆ.
ಯುದ್ಧದ ಕುರಿತು ಕೇಳಿದಾಗ, “ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಪ್ರಧಾನಿ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ದೇಶವೇ ಅವರ ಮೇಲೆ ನಂಬಿಕೆ ಇಟ್ಟಿದೆ,” ಎಂದ ಅವರು, ಮೋದಿಯವರ ನಾಯಕತ್ವವನ್ನು ದೇಶ ಹಾಗೂ ವಿಶ್ವದ ನಾಯಕರು ಗೌರವಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ನಿಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಷಯದಲ್ಲಿ ಪ್ರಧಾನಿ ಮೋದಿಯವರಿಗೆ ಬೆಂಬಲವಿದೆ ಎಂದು ಹೇಳಿರುವುದನ್ನು ಸಮರ್ಥಿಸಿಕೊಂಡರು. “ಅವರು ಹಿರಿಯ ನಾಯಕರು. ಅವರ ಮಾತಿಗೆ ಹೆಚ್ಚಿನ ಮಹತ್ವವಿದೆ. ಉಳಿದವರ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿಲ್ಲ,” ಎಂದು ಹೇಳಿದರು.