
ಧರ್ಮಸ್ಥಳ / ಬೆಳ್ತಂಗಡಿ : ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತು ಸುಜಾತಾ ಭಟ್ ಪ್ರಕರಣ ತನಿಖೆಯಲ್ಲಿ ಮಹತ್ವದ ತಿರುವು ಕಂಡು ಬಂದಿದೆ. ಸೆಪ್ಟೆಂಬರ್ 4 ರಂದು ಹೋರಾಟಗಾರ ಜಯಂತ್ ಟಿ. ಅವರನ್ನು ಎಸ್‌ಐಟಿ ತಂಡ ಕಠಿಣ ವಿಚಾರಣೆಗೆ ಒಳಪಡಿಸಿದ್ದು, ಸಂಜೆ 5:20 ಕ್ಕೆ ಹಾಜರಾದ ಜಯಂತ್ ಮೇಲೆ ಅಧಿಕಾರಿಗಳು ನಿಶ್ಚಲ ಪ್ರಶ್ನೋತ್ತರ ಮುಂದುವರೆಸಿದ್ದು, ಮಧ್ಯರಾತ್ರಿ 2:30 ಗಂಟೆಯವರೆಗೂ ವಿಚಾರಣೆ ನಡೆದಿತ್ತು. ಬಳಿಕ ಅವರನ್ನು ಮನೆಗೆ ತೆರಳಲು ಸೂಚಿಸಿದರೂ, ಸೆಪ್ಟೆಂಬರ್ 5ರಂದು ಬೆಳಗ್ಗೆ ಮತ್ತೆ ಹಾಜರಾಗುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಇದಕ್ಕೂ ಮುನ್ನ, ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಯೂಟ್ಯೂಬರ್ ಅಭಿಷೇಕ್ ವಿರುದ್ಧವೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸೆಪ್ಟೆಂಬರ್ 3ರಂದು ವಿಚಾರಣೆ ಆರಂಭಗೊಂಡಿದ್ದರೂ, ಮುಂದುವರಿದ ಹಂತವಾಗಿ ಸೆಪ್ಟೆಂಬರ್ 4ರ ರಾತ್ರಿ ಪೂರ್ತಿ ತನಿಖೆ ನಡೆದಿದ್ದು, ಈಗಲೂ ಅವರು ಎಸ್‌ಐಟಿ ವಶದಲ್ಲೇ ಇದ್ದಾರೆ. ಸೆಪ್ಟೆಂಬರ್ 5ರಂದು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಕಾಡಿನಲ್ಲಿ ಬುರುಡೆ ಶೋಧನೆ, ನ್ಯಾಯಾಲಯಕ್ಕೆ ಅವುಗಳನ್ನು ಹಾಜರುಪಡಿಸುವುದು, ಚಿನ್ನಯ್ಯನ ಸಂಪರ್ಕ, ಹಾಗೂ ಆರೋಪಿಗಳ ಮಧ್ಯೆ ಸಂಚು ರೂಪಿಸುವ ಎಲ್ಲಾ ಅಂಶಗಳು ಪ್ರಮುಖವಾಗಿ ಹೊರಹೊಮ್ಮಿವೆ. ಈ ಹಿನ್ನೆಲೆಯಲ್ಲಿ ಜಯಂತ್ ಟಿ. ಮತ್ತು ಅಭಿಷೇಕ್ ಇಬ್ಬರ ಮೇಲೂ ಷಡ್ಯಂತ್ರದ ಮಾಸ್ಟರ್‌ಮೈಂಡ್ ಶಂಕೆ ಗಟ್ಟಿಯಾಗಿದ್ದು, ವಿಚಾರಣೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಹಂತ ಪ್ರವೇಶಿಸಲಿದೆ.