
ರಾಜಸ್ಥಾನ ಪೊಲೀಸರು ಮಂಗಳವಾರ 2,000 ಕೋಟಿಗೂ ಹೆಚ್ಚು ಮೊತ್ತದ ಸೈಬರ್ ವಂಚನೆ ನಡೆಸಿದ ತಂಡದ ಕಿಂಗ್‌ಪಿನ್‌ನನ್ನು ಶ್ರೀಗಂಗಾನಗರದಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಅಜಯ್ ಆರ್ಯ ಅವರ ವಿರುದ್ಧ ದೇಶಾದ್ಯಂತ ಹಲವಾರು ಸೈಬರ್ ವಂಚನೆಯ ದೂರುಗಳು ದಾಖಲಾಗಿವೆ, ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿ ದೂರು ದಾಖಲಾಗಿದೆ.
ಗಂಗಾನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ರವರು ಮಾತನಾಡಿ ಬಂಧಿತ ಆರೋಪಿಗಳು ಸಾವಿರಾರು ಜನರಿಗೆ ಸುಮಾರು 2,000 ಕೋಟಿ ರೂಪಾಯಿಗಳ ಸೈಬರ್ ವಂಚನೆ ಮಾಡಿದ್ದಾರೆ.ಕರ್ನಾಟಕದ ನಿವಾಸಿ ಕಾಂತಪ್ಪ ಬಾಬು ಚವ್ಹಾಣ್ ಅವರು ಮಂಗಳವಾರ ಪುರಾಣಿ ಅಬಾದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು.
ಪೊಲೀಸರು ಆರ್ಯನ ಮನೆ ಮೇಲೆ ದಾಳಿ ನಡೆಸಿದ್ದು, ಶೋಧದ ವೇಳೆ 10 ಲಕ್ಷ ರೂ. ನಗದು, ಮೂರು ಸಿಪಿಯುಗಳು, ಆರು ಮೊಬೈಲ್ ಫೋನ್‌ಗಳು, ಎಂಟು ಎಟಿಎಂ ಕಾರ್ಡ್‌ಗಳು ಮತ್ತು ಐಷಾರಾಮಿ ಕಾರು ಸೇರಿದಂತೆ ಹಲವಾರು ದಾಖಲೆಗಳನ್ನು ಪತ್ತೆ ಮಾಡಿದರು. ಈ ಪ್ರಕರಣದಲ್ಲಿ ಅಜಯ್ ಆರ್ಯ, ದೀಪಕ್ ಆರ್ಯ, ಲಜಪತ್ ಆರ್ಯ, ಸೌರಭ್ ಚಾವ್ಹಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿಗಳು 2022 ರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಟೆಕ್ಟಲ್ ಟೆಕ್ ಎಂಬ ಕಂಪನಿಯನ್ನು ತೆರೆಯುವ ಮೂಲಕ ಜನರಿಗೆ ಸೈಬರ್ ತರಬೇತಿ ನೀಡಲು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.