
ಬೆಂಗಳೂರು : ಕಾರ್ಕಳ ಶಾಸಕ ಮತ್ತು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದ ಆಡಳಿತಾವಧಿಯಲ್ಲಿ ಅನುದಾನಗಳ ಕೊರತೆಯಿಂದಾಗಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ ಎಂದು ಆರೋಪಿಸಿದ್ದಾರೆ.
‘ಬೋಗಸ್ ಫ್ರಮ್ ಕಾಂಗ್ರೆಸ್’ ಎಂದು ಟೀಕೆ
ನಿಯಮ 69ರ ಅಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್, ಜನಪ್ರಿಯ ಸಿನಿಮಾ ‘ಸು ಫ್ರಮ್ ಸೋ’ ಹೆಸರನ್ನು ಬಳಸಿಕೊಂಡು ಸರ್ಕಾರವನ್ನು ವ್ಯಂಗ್ಯವಾಡಿದರು. “ಈ ಸರ್ಕಾರವನ್ನು ನಾನು ‘ಬಿ ಫ್ರಮ್ ಸಿ’ (B from C) ಎಂದು ಕರೆಯುತ್ತೇನೆ. ಇದರರ್ಥ ‘ಬೋಗಸ್ ಫ್ರಮ್ ಕಾಂಗ್ರೆಸ್’. ಕಳೆದ ಎರಡು ವರ್ಷದಲ್ಲಿ ಬೋಗಸ್ ಎಂದು ಹೇಳಿದ್ದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ” ಎಂದು ಟೀಕಿಸಿದರು.
ಅಭಿವೃದ್ಧಿ ಇಲ್ಲ, ಶಾಸಕರಿಗೆ ತಲೆ ಎತ್ತಲು ಸಾಧ್ಯವಿಲ್ಲ
ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಸುನಿಲ್ ಕುಮಾರ್ ಆರೋಪಿಸಿದರು. “ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿಲೋಮೀಟರ್ ಹೊಸ ರಸ್ತೆ ನಿರ್ಮಾಣವಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ವಸತಿ ಯೋಜನೆಗಳ ಬಗ್ಗೆಯೂ ಮಾತನಾಡಿದ ಅವರು, “ಮಾತೆತ್ತಿದರೆ ಬಡವರ ಪರ ಎನ್ನುತ್ತಾರೆ, ಆದರೆ ಕಳೆದ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕೂಡ ಕೊಟ್ಟಿಲ್ಲ” ಎಂದು ಪ್ರಶ್ನಿಸಿದರು.
ಇದೇ ವೇಳೆ, ಮುಖ್ಯಮಂತ್ರಿಯನ್ನು ನೇರವಾಗಿ ಪ್ರಶ್ನಿಸಿದ ಸುನಿಲ್ ಕುಮಾರ್, “ಈಗ ಅಧಿಕಾರದಲ್ಲಿರುವಾಗಲೇ ಶಾಸಕರಿಗೆ ಅನುದಾನ ನೀಡುತ್ತೀರೋ ಅಥವಾ ನವೆಂಬರ್ ನಂತರ ಬದಲಾಗುವ ಮುಖ್ಯಮಂತ್ರಿಯಿಂದ ಅನುದಾನ ನೀಡುತ್ತೀರೋ?” ಎಂದು ಕೇಳಿದರು.