
ಬೆಂಗಳೂರು: ಮಹಾಕುಂಭ ಮತ್ತು ತಲಕಾಡುಮೇಳಗಳಂತಹ ಧಾರ್ಮಿಕ ಕಾರ್ಯಕ್ರಮಗಳು ಭಾವನಾತ್ಮಕವಾಗಿರಬಹುದು, ಆದರೆ ಜನರನ್ನು ಮೂರ್ಖರನ್ನಾಗಿಸುವ ಕೆಲಸ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ತೀವ್ರ ಟೀಕೆ ಮಾಡಿದ್ದಾರೆ.
ಗಂಗಾಜಲ ಮಾರಾಟ: ಧರ್ಮದ ಹೆಸರಿನಲ್ಲಿ ವಾಣಿಜ್ಯ?
ಮಹಾಶಿವರಾತ್ರಿ ಅಂಗವಾಗಿ ಗಂಗಾಜಲ ವಿತರಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಂಗಾನದಿ ನೀರು ಕಲುಷಿತವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಆದರೆ, ಖಾಸಗಿ ಕಂಪನಿಗಳು ಅದನ್ನು ಮಾರಾಟ ಮಾಡುತ್ತಿವೆ. ಇದು ಸರಿಯೇ ?” ಎಂದು ಪ್ರಶ್ನಿಸಿದರು.
ಕಲುಷಿತ ನೀರಿನಿಂದ ನಷ್ಟ ಯಾರಿಗೆ?
“ಶೇ.12 ರಷ್ಟು ರೋಗಗಳ ಮೂಲ ಗಂಗಾ ನೀರು ಎಂದು ಅಧ್ಯಯನ ವರದಿಗಳು ಹೇಳಿವೆ. ನೀರು ಶುದ್ಧವಾಗಿರದಿದ್ದರೆ ಕೃಷಿ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು. ಪ್ರಜಾಪ್ರಭುತ್ವದಲ್ಲಿ ಭಾವನಾತ್ಮಕ ರಾಜಕಾರಣದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುವುದು ಖಂಡನೀಯ,” ಎಂದು ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಪ್ರಕರಣದ ಬಗ್ಗೆ ಮೋದಿ ಮಾತನಾಡಲಿ!
ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಮುಡಾ ನಿವೇಶನ ಹಂಚಿಕೆ ಕುರಿತು ಹಿಂದೆ ಮಾತನಾಡಿದ್ದರು. ಈಗ ಕುಮಾರಸ್ವಾಮಿ ವಿಚಾರದಲ್ಲೂ ಪ್ರತಿಕ್ರಿಯಿಸಲಿ,” ಎಂದು ಲೇವಡಿ ಮಾಡಿದರು.