
ಇರಾನ್‌ನ ಮೂರು ಪರಮಾಣು ಸಂಶೋಧನಾ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಅಮೆರಿಕ ನಡೆಸಿದ ವಾಯುದಾಳಿಯಿಂದ ಯಾವುದೇ ಪರಮಾಣು ವಿಕಿರಣ ಸೋರಿಕೆ ಆಗಿಲ್ಲ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ. ದಾಳಿಗೆ ಮುಂಚೆಯೇ ಈ ಸೌಲಭ್ಯಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಇರಾನ್ ಆರೋಪ
ಈ ಕ್ರಮವನ್ನು ಕಟುವಾಗಿ ಖಂಡಿಸಿದ ಇರಾನ್, ಅಮೆರಿಕದ ಈ ಕಾರ್ಯವಿಧಾನವು ವಿಶ್ವ ಶಾಂತಿಗೆ ಬೆದರಿಕೆ ಹಾಕುವುದರ ಜೊತೆಗೆ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದೆ. “ಅಮೆರಿಕಾ ತನ್ನ ದಾಳಿಯನ್ನು ಪ್ರಾರಂಭಿಸಿದೆ, ಆದರೆ ಅದನ್ನು ನಾವೇ ಅಂತ್ಯಗೊಳಿಸುತ್ತೇವೆ” ಎಂದು ಇರಾನ್ ಸರ್ಕಾರ ಹೇಳಿದೆ.
ವಿದೇಶಾಂಗ ಸಚಿವರ ತೀವ್ರ ಪ್ರತಿಕ್ರಿಯೆ
ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್, ತಮ್ಮ ದೇಶದ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಏಕಪಕ್ಷೀಯ ಕ್ರಮಗಳು ಪ್ರಪಂಚದ ಸ್ಥಿರತೆಗೆ ಹಾನಿಕಾರಕವೆಂದು ಅವರು ಟೀಕಿಸಿದ್ದಾರೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳು ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಪುನರಾವರ್ತಿಸಿದೆ ಮತ್ತು ಯಾವುದೇ ಸೋರಿಕೆಯ ಸಂಭವವಿಲ್ಲ ಎಂದು ಖಚಿತಪಡಿಸಿದೆ.