
ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಗಲ್ಫ್ ಮತ್ತು ನೆರೆಯ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಗೆ ಶನಿವಾರ (ಮಾರ್ಚ್ 7, 2026) ಕ್ಷಮೆಯಾಚಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕವನ್ನು ಹೊರತುಪಡಿಸಿ ಇತರ ದೇಶಗಳ ಮೇಲೆ ದಾಳಿ ನಡೆಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೂರದರ್ಶನದಲ್ಲಿ ನೀಡಿದ ವಿಶೇಷ ಭಾಷಣದಲ್ಲಿ ಪೆಜೆಶ್ಕಿಯಾನ್, ಇರಾನ್‌ನ ಹಂಗಾಮಿ ನಾಯಕತ್ವ ಮಂಡಳಿಯು ನೆರೆಯ ರಾಷ್ಟ್ರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ತಿಳಿಸಿದರು. “ನೆರೆ ದೇಶಗಳು ಇರಾನ್ ವಿರುದ್ಧ ದಾಳಿ ನಡೆಸದ ಹೊರತು ನಾವು ಅವರ ಮೇಲೆ ಕ್ಷಿಪಣಿ ಪ್ರಯೋಗ ಮಾಡುವುದಿಲ್ಲ. ಈ ಘಟನೆಯ ಬಗ್ಗೆ ನಾನು ನೆರೆ ದೇಶಗಳ ಕ್ಷಮೆಯಾಚಿಸುತ್ತೇನೆ, ಅವರ ಮೇಲೆ ದಾಳಿ ಮಾಡುವ ಯಾವುದೇ ಮಹತ್ವಾಕಾಂಕ್ಷೆ ನಮಗಿಲ್ಲ” ಎಂದು ಅವರು ಸೌಹಾರ್ದತೆಯ ಸಂದೇಶ ನೀಡಿದ್ದಾರೆ.
ಆದರೆ, ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ‘ಬೇಷರತ್ತಾಗಿ ಶರಣಾಗಬೇಕು’ ಎಂದು ಹಾಕಿರುವ ಷರತ್ತನ್ನು ಮಸೂದ್ ಕಟುವಾಗಿ ತಿರಸ್ಕರಿಸಿದ್ದು, “ಶರಣಾಗತಿಯ ಕನಸು ಕಾಣುವವರು ಅದನ್ನು ಮಣ್ಣಿನ ಪಾಲಾಗಿಸಬೇಕಾಗುತ್ತದೆ” ಎಂದು ಗುಡುಗಿದ್ದಾರೆ.



































