
ಟೆಹ್ರಾನ್/ಜೆರುಸಲೆಮ್: ಅಮೆರಿಕ-ಇಸ್ರೇಲ್ ಕೂಟ ಮತ್ತು ಇರಾನ್ ನಡುವಿನ ಸಮರವು ಬುಧವಾರದ ವೇಳೆಗೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಬದಲು ಮತ್ತಷ್ಟು ಸ್ಫೋಟಕ ಹಂತ ತಲುಪಿದೆ. ಉಭಯ ರಾಷ್ಟ್ರಗಳ ನಡುವೆ ನೇರ ಸೈನಿಕ ಸಂಘರ್ಷ ಏರ್ಪಟ್ಟಿದ್ದು, ಶಾಂತಿ ಮಾತುಕತೆಯ ಯಾವುದೇ ಮುನ್ಸೂಚನೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ.
ಇರಾನ್‌ನಲ್ಲಿ ಮೃತ್ಯುತಾಂಡವ: ಶಾಲಾ ಮಕ್ಕಳ ಬಲಿ ಈ ಭೀಕರ ಯುದ್ಧದಲ್ಲಿ ಇರಾನ್ ಒಂದರಲ್ಲೇ ಇದುವರೆಗೆ 787 ಜನರು ಜೀವ ಕಳೆದುಕೊಂಡಿದ್ದಾರೆ. ಅತ್ಯಂತ ದುರದೃಷ್ಟಕರ ಘಟನೆಯಲ್ಲಿ, ಮಿನಾಬ್ ಪ್ರಾಂತ್ಯದ ಪ್ರಾಥಮಿಕ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯಿಂದಾಗಿ 165 ವಿದ್ಯಾರ್ಥಿನಿಯರು ಹಾಗೂ ಶಾಲಾ ಸಿಬ್ಬಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇತ್ತ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಮಂದಿ ಹತರಾಗಿದ್ದಾರೆ.
ಗಲ್ಫ್ ರಾಷ್ಟ್ರಗಳಿಗೂ ಹಬ್ಬಿದ ಯುದ್ಧದ ಕಿಚ್ಚು ಇರಾನ್ ನಡೆಸಿದ ಪ್ರತಿದಾಳಿಯು ಇಸ್ರೇಲ್ ಸೇರಿದಂತೆ ನೆರೆಹೊರೆಯ ರಾಷ್ಟ್ರಗಳನ್ನು ನಡುಗಿಸಿದೆ. ಜೆರುಸಲೆಮ್ ಸಮೀಪದ ಬೀಟ್ ಶೆಮೇಶ್ ಮೇಲೆ ಇರಾನ್ ಎಸೆದ ಕ್ಷಿಪಣಿಗಳಿಗೆ 10 ನಾಗರಿಕರು ಬಲಿಯಾಗಿದ್ದಾರೆ. ಕುವೈತ್‌ನಲ್ಲಿ 2 ಸೈನಿಕರು ಸೇರಿದಂತೆ 3 ಮಂದಿ ಹಾಗೂ ಯುಎಇನಲ್ಲಿ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಹ್ರೇನ್‌ನ ಸಲ್ಮಾನ್ ಕೈಗಾರಿಕಾ ಪ್ರದೇಶದಲ್ಲಿ ಕ್ಷಿಪಣಿ ಪ್ರತಿಬಂಧಿಸಿದ ಬಳಿಕ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ವಿಶೇಷವೆಂದರೆ, ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಅಮೆರಿಕದ 6 ಉನ್ನತ ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸಮುದ್ರದಲ್ಲಿ ಭಾರತೀಯರ ಸಾವು ಯುದ್ಧದ ಬಿಸಿ ಭಾರತೀಯರಿಗೂ ತಟ್ಟಿದ್ದು, ಒಮಾನ್ ಕರಾವಳಿಯಲ್ಲಿ ಇರಾನ್ ಎರಡು ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 3 ಮಂದಿ ಭಾರತೀಯ ನಾವಿಕರು ಮೃತಪಟ್ಟಿದ್ದಾರೆ.
F-35 ‘ಆದಿರ್’ ಮೂಲಕ ಇಸ್ರೇಲ್ ಇತಿಹಾಸ ಸೇನಾ ಕಾರ್ಯಾಚರಣೆಯಲ್ಲಿ ಇಸ್ರೇಲ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ F-35 ‘ಆದಿರ್’ ಎಂಬ ಅತ್ಯಾಧುನಿಕ ಮಾನವಸಹಿತ ಯುದ್ಧ ವಿಮಾನವನ್ನು ಬಳಸಿ ಟೆಹ್ರಾನ್ ಆಕಾಶದಲ್ಲಿ ಇರಾನಿನ ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ. ಇರಾನ್ ರಾಜಧಾನಿಯ ಮೇಲೆ ಇಸ್ರೇಲ್ ಸತತವಾಗಿ ಬಾಂಬ್ ಮಳೆಗರೆಯುತ್ತಿದೆ.
ಹೆಜ್ಬುಲ್ಲಾ ಗುರಿಗಳ ಮೇಲೆ ಆಕ್ರಮಣ ಬೈರುತ್ ಸೇರಿದಂತೆ ಲೆಬನಾನ್‌ನ ವಿವಿಧ ಭಾಗಗಳಲ್ಲಿರುವ ಹೆಜ್ಬುಲ್ಲಾ ಉಗ್ರರ ಅಡಗುದಾಣಗಳ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಗಲ್ಫ್ ವಲಯದಲ್ಲಿರುವ ಅಮೆರಿಕದ ಸೇನಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.
ಬಹ್ರೇನ್ ಸೇನೆಯ ಮಾಹಿತಿ ಪ್ರಕಾರ, ಯುದ್ಧ ಆರಂಭವಾದಾಗಿನಿಂದ ಇರಾನ್ ಉಡಾಯಿಸಿದ 74 ಕ್ಷಿಪಣಿಗಳು ಮತ್ತು 95 ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಗಿದೆ. ಆದರೆ ಬುಧವಾರ ನಡೆದ ಡ್ರೋನ್ ದಾಳಿಯಿಂದಾಗಿ ಬಹ್ರೇನ್‌ನ ಹಲವು ಕಟ್ಟಡಗಳು ಜಖಂಗೊಂಡಿವೆ. ಸದ್ಯ ಇಡೀ ಪಶ್ಚಿಮ ಏಷ್ಯಾ ವಲಯವು ಯುದ್ಧದ ಭೀತಿಯಲ್ಲಿ ದಿನದೂಡುತ್ತಿದೆ.



































