
ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಈ ಸೀಸನ್‌ಗೆ ಭರ್ಜರಿ ಪ್ರಾರಂಭ ಮಾಡಿದೆ. ಈ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದದ್ದು ಮುಂಬೈ ಇಂಡಿಯನ್ಸ್ ಪರ “ಇಂಪ್ಯಾಕ್ಟ್ ಪ್ಲೇಯರ್” ಆಗಿ ಮೊದಲ ಬಾರಿಗೆ ಕಣಕ್ಕಿಳಿದ ಕೇರಳದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು. ಕೇರಳದ ಮಲಪ್ಪುರಂನ 24 ವರ್ಷದ ಈ ಆಟಗಾರ ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ತಮ್ಮ ಸ್ಪಿನ್ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಗಮನ ಸೆಳೆದ ಅವರು, ಮಹೇಂದ್ರ ಸಿಂಗ್ ಧೋನಿಯಿಂದ ಶ್ಲಾಘನೆ ಕೂಡಾ ಪಡೆದರು.
ವಿಘ್ನೇಶ್ ಪುತ್ತೂರು ಮೂಲತಃ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ಬಲಗೈ ಬ್ಯಾಟ್ಸ್ ಮೆನ್ ಹಾಗೂ ಎಡಗೈ ಸ್ಪಿನ್ನರ್ ಆಗಿರುವ ಈ ಯುವ ಆಟಗಾರ 14 ಮತ್ತು 19 ವರ್ಷದೊಳಗಿನ ರಾಜ್ಯ ತಂಡದಲ್ಲಿ ಆಡಿದ್ದರೂ, ಕೇರಳದ ಹಿರಿಯರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿಲ್ಲ. 2025ರ ಟಾಟಾ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು. ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಮತ್ತು ಕೇರಳ ಕ್ರಿಕೆಟ್ ಲೀಗ್ (KCL) ನಲ್ಲಿ ಆಡಿರುವ ಅನುಭವ ಹೊಂದಿರುವ ಅವರು, ಅಲೆಪ್ಪಿ ರಿಪ್ಪಲ್ಸ್ ತಂಡದ ಪರ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು.

ಆಟೋ ಚಾಲಕ ತಂದೆ ಸುನಿಲ್ ಕುಮಾರ್ ಮತ್ತು ಗೃಹಿಣಿ ತಾಯಿ ಬಿಂದು ಅವರ ಮಗನಾದ ವಿಘ್ನೇಶ್, ಆರ್ಥಿಕವಾಗಿ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಕ್ರಿಕೆಟ್ ಕನಸನ್ನು ಮುಂದುವರಿಸಿದರು. ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದ ಅವರು, ಕೇರಳ ಕಾಲೇಜು ಪ್ರೀಮಿಯರ್ ಲೀಗ್‌ನಲ್ಲಿ ಪ್ರಮುಖ ಬೌಲರ್‌ಗಳಲ್ಲೊಬ್ಬರಾಗಿದ್ದರು. ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಲು ಮುಂದಾಳುವಾಗಿ, ದಕ್ಷಿಣ ಆಫ್ರಿಕಾದ SA T20 ಲೀಗ್‌ನಲ್ಲಿ ಮುಂಬೈ ಕೇಪ್‌ಟೌನ್ ತಂಡದೊಂದಿಗೆ ಅಭ್ಯಾಸ ಮಾಡಿ, ರಶೀದ್ ಖಾನ್ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ದಿಗ್ಗಜರೊಂದಿಗೆ ಸಮಯ ಕಳೆದಿದ್ದರು.
ಈ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿಘ್ನೇಶ್ ಪುತ್ತೂರು ಇದೀಗ ಕ್ರಿಕೆಟ್ ವೃತ್ತಿಪರರ ಗಮನ ಸೆಳೆದಿದ್ದು, ಮುಂಬೈ ಇಂಡಿಯನ್ಸ್ ಪರ ಭವಿಷ್ಯದಲ್ಲಿ ಹೆಚ್ಚು ಅವಕಾಶ ಪಡೆಯುವ ನಿರೀಕ್ಷೆ ಇದೆ. ಅವರ ಪ್ರದರ್ಶನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.