
ಗದಗ: ಗದಗ ನಗರ ಹಾಗೂ ಬೆಟಗೇರಿ ಬಡಾವಣೆ ಪ್ರದೇಶಗಳಲ್ಲಿ ನಡೆದ ಮನೆಗಳ್ಳತನ ಮತ್ತು ವಂಚನೆ ಪ್ರಕರಣಗಳಲ್ಲಿ ಒಳಗೊಂಡ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.
ತಮಿಳುನಾಡು-ಹೈದ್ರಾಬಾದ್ ಮೂಲದ ಆರೋಪಿಗಳು
ಬಂಧಿತರನ್ನು ತಮಿಳುನಾಡಿನ ತಿರುವಾವುರು ಜಿಲ್ಲೆಯ ಪುನವಾಸನ ಸ್ಟ್ರೀಟ್‌ನ ವೆಂಕಟೇಶನ್ ರಂಗನಾಥನ್ ವಡಬಾದಿ ಮಂಗಳಂ ಮತ್ತು ಚೆನ್ನೈನ ನಚ್ಚಿಕುಪ್ಪಂ ಲೈಟ್ ಹೌಸ್ ನಿವಾಸಿ ಸೂರ್ಯ ಶೆಟ್ಟಿ ವಿಜಯಕುಮಾರ ಎಂದು ಗುರುತಿಸಲಾಗಿದೆ. ಈ ಇಬ್ಬರು ಹೈದ್ರಾಬಾದ್‌ನ ಎಲ್.ಬಿ.ನಗರ ಬೊಮ್ಮಳಗುಡಿಯಲ್ಲಿ ವಾಸವಿದ್ದರು.
ಗದಗನಲ್ಲಿ ಮನೆಗಳಿಗೆ ಕಳ್ಳತನ, ಬಸ್-ಟ್ರೇನ್ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳು
ಬಂಧಿತರಿಂದ 7.60 ಲಕ್ಷ ರೂ. ಮೌಲ್ಯದ 130 ಗ್ರಾಂ ಬಂಗಾರದ ಆಭರಣಗಳು, 1.52 ಲಕ್ಷ ರೂ. ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ನಾಣ್ಯಗಳು ವಶಕ್ಕೆ ಪಡೆಯಲಾಗಿದೆ. ಕೀಲಿ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡ ಕೃತ್ಯವೆಸಗಿದ ಬಳಿಕ ಬಸ್ ಮತ್ತು ರೈಲಿನ ಮೂಲಕ ಪರಾರಿಯಾಗುತ್ತಿತ್ತು.
ಈ ಸಂಬಂಧ 7 ಪ್ರಕರಣಗಳು ದಾಖಲಾಗಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ ಮತ್ತು ಡಿವೈಎಸ್‌ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡ ಬಂಧನ ಕಾರ್ಯಾಚರಣೆ ನಡೆಸಿದೆ.

ವಂಚನೆ ಪ್ರಕರಣ: ಬಿಹಾರ ಮೂಲದ ಇಬ್ಬರು ವಂಚಕರ ಬಂಧನ!
ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಬಂಗಾರ ತೊಳೆದು ಹೊಳಪು ಬರುವಂತೆ ಮಾಡುತ್ತೇವೆ” ಎಂದು ವಂಚನೆ ನಡೆಸುತ್ತಿದ್ದ ಇಬ್ಬರು ಅಂತಾರಾಜ್ಯ ವಂಚಕರು ಪೊಲೀಸರ ಕೈಗೆ ಸಿಕ್ಕಿದ್ದಾರೆ.
ವಶಪಡಿಸಿಕೊಂಡ ಆಭರಣಗಳು:
1.40 ಲಕ್ಷ ರೂ. ಮೌಲ್ಯದ 35 ಗ್ರಾಂ ಬಂಗಾರದ ಚೈನ್
1.80 ಲಕ್ಷ ರೂ. ಮೌಲ್ಯದ 45 ಗ್ರಾಂ ಬಂಗಾರದ ಬಳೆಗಳು
40 ಸಾವಿರ ಮೌಲ್ಯದ 10 ಗ್ರಾಂ ಚೈನ್
12 ಸಾವಿರ ಮೌಲ್ಯದ 3 ಗ್ರಾಂ ಉಂಗುರ
ಒಟ್ಟು 3.72 ಲಕ್ಷ ರೂ. ಮೌಲ್ಯದ 93 ಗ್ರಾಂ ಬಂಗಾರದ ಆಭರಣಗಳು
ಬಿಹಾರ ಮೂಲದ ವಂಚಕರು:
ಬಂಧಿತರು ಬಿಹಾರದ ಕಗರಿಯಾ ಜಿಲ್ಲೆಯ ದೀಪಕ್ ಅಶೋಕ ಗುಪ್ತಾ ಮತ್ತು ಭಾಗಲಪೂರ ಜಿಲ್ಲೆಯ ಬಿಪಿನ್ ಕುಮಾರ ನಂದಕಿಶೋರ್ ಶಾಹ ಎಂದು ಗುರುತಿಸಲಾಗಿದೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಆರೋಪಿಗಳ ವಿರುದ್ಧ ಹಿಂದೆಯೂ ಪ್ರಕರಣಗಳಿದ್ದು, ಜಾಮೀನು ರದ್ದುಪಡಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.