
ಉಡುಪಿ : ಉಡುಪಿಯ ಪ್ರಸಿದ್ಧ ಉದ್ಯಮಿ ಹಾಗೂ ಆಭರಣ ಜ್ಯುವೆಲ್ಲರ್ಸ್‌ನ ನಿರ್ದೇಶಕ ಸುಭಾಶ್ ಎಂ. ಕಾಮತ್ ಅವರು ತಮ್ಮ ಛಾಯಾಗ್ರಹಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಅವರ ವನ್ಯಜೀವಿ ಛಾಯಾಚಿತ್ರವೊಂದು ಪ್ರತಿಷ್ಠಿತ ಕ್ಲಬ್ ಗೋಲ್ಡ್ ಅವಾರ್ಡ್‌ಗೆ ಭಾಜನವಾಗಿದೆ.
ಮಸೈಮಾರಾದಲ್ಲಿ ಸೆರೆಹಿಡಿದ ಚಿತ್ರಕ್ಕೆ ಗೌರವ
ಕೀನ್ಯಾದ ಮಸೈಮಾರಾದಲ್ಲಿ ಕಾಮತ್ ಅವರು ಸೆರೆಹಿಡಿದಿದ್ದ “ಹಂಗರ್ ವರ್ಸಸ್ ಹೋಪ್” ಎಂಬ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ದೊರೆತಿದೆ. ಈ ಚಿತ್ರದಲ್ಲಿ ಎರಡು ಚಿರತೆಗಳು ಬೇಟೆಯನ್ನು ಬೆನ್ನಟ್ಟುವ ದೃಶ್ಯವಿದೆ. ಓರಾ ಡಿ ಫ್ರೇಮ್ ಸರ್ಕ್ಯೂಟ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿದ್ದರು. ಈ ಪ್ರಶಸ್ತಿಯು ಪ್ರತಿಷ್ಠಿತ ಎಫ್. ಐ. ಎ. ಪಿ. ಮಾನ್ಯತೆ ಪಡೆದಿದೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಖ್ಯಾತ ಅಂತರರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು ಅವರಿಂದ ಛಾಯಾಗ್ರಹಣ ಕಲಿತ ಸುಭಾಶ್ ಕಾಮತ್, ತಮ್ಮ ಯಶಸ್ವಿ ಉದ್ಯಮದ ಜೊತೆಗೆ ಈ ಹವ್ಯಾಸವನ್ನು ಬೆಳೆಸಿಕೊಂಡು ಈ ಸಾಧನೆ ಮಾಡಿದ್ದಾರೆ. ಒಂದು ಯಶಸ್ವಿ ವನ್ಯಜೀವಿ ಛಾಯಾಚಿತ್ರದ ಹಿಂದೆ ಛಾಯಾಗ್ರಾಹಕನ ತಾಳ್ಮೆ, ಸತತ ಪರಿಶ್ರಮ ಮತ್ತು ಪ್ರಕೃತಿಯ ಅರಿವು ಅಡಗಿರುತ್ತದೆ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.