
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಪೂರ್ ಲೇಡಿ’ ಎಂದು ಕರೆಯುವ ಮೂಲಕ ಅವಮಾನಿಸಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಾಷ್ಟ್ರಪತಿಯನ್ನೇ ಅವಮಾನಿಸಲು ಎಷ್ಟು ಧೈರ್ಯ ನಿಮಗೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಸಂಸತ್ ಬಜೆಟ್ ಅಧಿವೇಶನ ಪ್ರಾರಂಭಗೊಂಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಅವರ ಭಾಷಣ ಮುಗಿದ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ಪೂರ್ ಲೇಡಿ, ಭಾಷಣ ಮುಗಿಸುವ ಹೊತ್ತಿಗೆ ಅವರು ತುಂಬಾ ಸುಸ್ತಾಗಿದ್ದರು” ಎಂದು ವ್ಯಂಗ್ಯವಾಡಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಕಾಂಗ್ರೆಸ್ ಲೇವಡಿ ಮಾಡುತ್ತಿದೆ. ಶ್ರೀಮಂತ ಕುಟುಂಬ ರಾಜಕಾರಣ ಮಾಡುತ್ತಿದ್ದು, ಬಡವರು ಹಾಗೂ ಬುಡಕಟ್ಟು ಸಮುದಾಯದಿಂದ ಬಂದವರನ್ನು ಕೆಳಗೆ ತಳ್ಳಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ನವರು ಸಂಸದೀಯ ಶಿಷ್ಟಾಚಾರ ಮರೆತು, ನಗರ ನಕ್ಸಲ್ ಮನೋಭಾವದ ಭಾಷೆ ಬಳಸುತ್ತಿದ್ದಾರೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪತಿಯ ಸ್ಥಾನಕ್ಕೆ ಗೌರವವಿಲ್ಲದೆ, ಅವಮಾನಿಸುವ ಮೂಲಕ ಅವರು ಭಾರತ ದೇಶದ ಪರಂಪರೆ ಹಾಗೂ ಸಂವಿಧಾನವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.