
ಕಲಬುರ್ಗಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮಿಸಲಾತಿ ನೀಡುವಾಗ ಭಿನ್ನ ಕೆನೆಪದರ ನೀತಿ ಅನ್ವಯಿಸುತ್ತಿರುವುದರಿಂದಾಗಿ ವೇತನದಾರರ ಮಕ್ಕಳು ಅಖಿಲ ಭಾರತ ಹಾಗೂ ರಾಜ್ಯ ಕೋಟಾದಡಿ ವೈದ್ಯಕೀಯ, ಎಂಜಿನಿಯರಿಂಗ್ ಕೋಟಾದಡಿ ಪ್ರವೇಶ ಪಡೆಯುವಾಗ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ ಟಿ ಎ) ವೈದ್ಯಕೀಯ, ದಂತ ವೈದ್ಯಕೀಯ , ಆಯುರ್ವೇದ, ಪಶುವೈದ್ಯಕೀಯ , ಹೋಮಿಯೋಪಥಿ ಕೊರ್ಸಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್), ಐಐಟಿ ಸೇರಿದಂತೆ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸುತ್ತದೆ. ನೀಟ್, ಜೆಇಇ ಸೇರಿದಂತೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳನ್ನು ಬರೆದು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರ ವೇತನ ಆದಾಯ ₹8 ಲಕ್ಷಕ್ಕಿಂತ ಹೆಚ್ಚಿದ್ದರೂ ಅಂತಹ ಮಕ್ಕಳಿಗೆ ಅಖಿಲ ಭಾರತ ಕೋಟಾದ ಅಡಿ ಪ್ರವೇಶ ನೀಡಲಾಗುತ್ತದೆ. ಅದೇ ವಿದ್ಯಾರ್ಥಿಗಳು ರಾಜ್ಯದ ಕೋಟಾದಡಿ ಪ್ರವೇಶ ಪಡೆಯುವಾಗ ಕೆನೆಪರದ ನೀತಿ ಅನ್ವಯಿಸಲಾಗುತ್ತಿದೆ.
ರಾಜ್ಯದಲ್ಲಿನ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ಕ್ಕೆ ಕೆನೆಪದರ ಅನ್ವಯವಾಗುವುದಿಲ್ಲ. ಆದರೆ, 2ಎ, 2ಬಿ, 3ಎ, ಮತ್ತು 3ಬಿ ಪ್ರ-ವರ್ಗದಲ್ಲಿ ಬರುವ ಇತರೆ ಹಿಂದುಳಿದ ಜಾತಿಗಳಿಗೆ ಕೆನೆಪದರ ಅನ್ವಯವಾಗುತ್ತದೆ. ಹೀಗಾಗಿ, ₹8 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವ ನೌಕರರ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ವರ್ಗದಡಿಯೇ ಸ್ಪರ್ಧಿಸುವ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಹಿಂದುಳಿದ ಕೆನೆಪದರಕ್ಕೆ ಕೃಷಿ ಹಾಗೂ ವೇತನ ಆದಾಯ ಪರಿಗಣಿಸುವುದಿಲ್ಲ.ಕೇಂದ್ರ ಸರ್ಕಾರದ 1993ರ ಅಧಿಸೂಚನೆಯಂತೆ ರಾಜ್ಯವೂ ಕೃಷಿ ಮತ್ತು ವೇತನ ಆದಾಯಹೊರಗಿಟ್ಟು ಕೆನೆಪದರ ನೀತಿ ಅನುಸರಿಸಬೇಕು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯಲ್ಲಿ ಕೆನೆಪದರ ಕುರಿತು ವಿವಿಧ ಆದೇಶಗಳನ್ನು ಹೊರಡಿಸಿವೆ. ಕೇಂದ್ರ ಸರ್ಕಾರ ಕೆನೆಪದರ ನೀತಿ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ, ಹಿಂದುಳಿದ ವರ್ಗದ ಕುಟುಂಬಗಳ ವಾರ್ಷಿಕ ಆದಾಯ ಲೆಕ್ಕ ಹಾಕುವಾಗ ಕೃಷಿ ಮತ್ತು ವೇತನ ಪರಿಗಣಿಸದೆ, ವ್ಯಾಪಾರ, ವ್ಯವಹಾರ, ಕೈಗಾರಿಕೆ ಮತ್ತಿತರ ಸಂಪತ್ತಿನ ಅದಾಯಗಳನ್ನು ಪರಿಗಣಿಸಲಾಗುತ್ತದೆ. ಕರ್ನಾಟಕ ಹೊರತುಪಡಿಸಿ ಇತರ ಬಹುತೇಕ ರಾಜ್ಯಗಳು ಕೇಂದ್ರದ ನಿಯಮಗಳನ್ನೇ ಅಳವಡಿಸಿಕೊಂಡಿವೆ.
ಕರ್ನಾಟಕದಲ್ಲಿ ಮಾತ್ರ ವೇತನವನ್ನು ಒಳಗೊಂಡು ವಾರ್ಷಿಕ ಆದಾಯ ಲೆಕ್ಕ ಹಾಕಲಾಗುತ್ತದೆ ಎಂದು ಮಿಸಲಾತಿ ಭಿನ್ನ ಕೆನೆಪದರ ನೀತಿಯಿಂದ ಕರ್ನಾಟಕದ ವಿಧ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರಸ್ತಾಪಿಸಿದರು ಇದಕ್ಕೆ ಉತ್ತರಿಸಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಗೌಡರು ಇದು ನನ್ನ ಇಲಾಖೆ ಸಂಭಂದಿಸಿದ ವಿಷಯವಾದರೂ ಸಮಾಜಕಲ್ಯಾಣ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.