
ರಾಯ್‌ಪುರ : ‘ರಾಧೇ.. ರಾಧೇ..’ ಎಂದು ಶುಭ ಕೋರಿದ ತಪ್ಪಿಗೆ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿಗೆ ಶಿಕ್ಷಕಿಯೊಬ್ಬಳು ಥಳಿಸಿ, ಆಕೆಯ ಬಾಯಿಗೆ ಟೇಪ್ ಅಂಟಿಸಿದ ಅಮಾನವೀಯ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ಆರೋಪಿ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿಗೆ ಥಳಿಸಿ, ಬಾಯಿಗೆ ಟೇಪ್ ಅಂಟಿಸಿದ ಪ್ರಾಂಶುಪಾಲೆ
ದುರ್ಗ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನರ್ಸರಿ ತರಗತಿಯಲ್ಲಿ ಓದುತ್ತಿರುವ ಮೂರೂವರೆ ವರ್ಷದ ಬಾಲಕಿಯೊಬ್ಬಳು ತನ್ನ ಶಿಕ್ಷಕಿಯನ್ನು ‘ರಾಧೇ.. ರಾಧೇ..’ ಎಂದು ಸಂಬೋಧಿಸಿದ್ದಾಳೆ. ಇದರಿಂದ ಕೋಪಗೊಂಡ ಶಾಲೆಯ ಪ್ರಾಂಶುಪಾಲೆ ಇಲಾ ಎವನ್ ಕಾಲ್ವಿನ್, ಆ ಬಾಲಕಿಗೆ ಥಳಿಸಿದ್ದಾರೆ. ಆ ನಂತರ ಅವಳ ಬಾಯಿಗೆ ಟೇಪ್ ಅಂಟಿಸಿ ಕ್ರೌರ್ಯ ಮೆರೆದಿದ್ದಾರೆ.
ಪೊಲೀಸರಿಂದ ಬಂಧನ, ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಾಂಶುಪಾಲೆ ಇಲಾ ಎವನ್ ಕಾಲ್ವಿನ್ ಅವರನ್ನು ಬಂಧಿಸಲಾಗಿದೆ. ಬಾಲಕಿಯ ಮೇಲೆ ಹಲ್ಲೆ, ಧಾರ್ಮಿಕ ಭಾವನೆಗಳಿಗೆ ಅಡ್ಡಿ, ಮಗುವಿನ ಮೇಲೆ ಕ್ರೌರ್ಯ ಹಾಗೂ ಇತರ ಅಪರಾಧಗಳ ಕಾರಣಕ್ಕಾಗಿ ಅವರನ್ನು ಭಾರತೀಯ ನ್ಯಾಯ ಸಂಹಿತೆಯ (ಬಿ.ಎನ್.ಎಸ್.) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.