
ಪಾಟ್ನಾ : ಮಂಗಳವಾರ ರಾತ್ರಿ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಯಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ (ಸಂಖ್ಯೆ 6E 2482) ಭಾರೀ ಅಪಾಯದಿಂದ ಪಾರಾಗಿ ಇಳಿದಿದೆ. ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್‌ವೇಯಲ್ಲಿ ನಿಗದಿಪಡಿಸಿದ ಟಚ್‌ಡೌನ್ ಪಾಯಿಂಟ್‌ನಿಂದ ಸ್ವಲ್ಪ ಮುಂದೆ ಸಾಗಿತ್ತು. ಉಳಿದ ರನ್‌ವೇ ವಿಮಾನ ನಿಲುಗಡೆಗೆ ಸುರಕ್ಷಿತವಲ್ಲ ಎಂದು ಅರಿತ ತಕ್ಷಣವೇ ಪೈಲಟ್ ಮತ್ತೆ ವಿಮಾನವನ್ನು ಟೇಕ್‌ಆಫ್ ಮಾಡಿದ್ದಾರೆ.
ನಂತರ ವಿಮಾನವು ಪಾಟ್ನಾ ಆಕಾಶದಲ್ಲಿ ಸುಮಾರು ಮೂರು ಸುತ್ತು ಹಾರಾಡಿ, ರಾತ್ರಿ 9 ಗಂಟೆಗೆ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 173 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಪೈಲಟ್‌ನ ಚಾಣಾಕ್ಷತೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಘಟನೆ ಇನ್ನೊಂದು ದೊಡ್ಡ ದುರಂತವನ್ನು ತಪ್ಪಿಸಿದೆ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.