
ದೆಹಲಿ : ಭಾರತದ ನೌಕಾಪಡೆಯ ಪ್ರಮುಖ ಕಚೇರಿಯಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದ ಮೇಲೆ ನೌಕಾ ಸಿಬ್ಬಂದಿಯೊಬ್ಬನನ್ನು ರಾಜಸ್ಥಾನ ಪೊಲೀಸರು ದೆಹಲಿಯಲ್ಲಿ ಬಂಧಿಸಿರುವ ಘಟನೆ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ.
ಬಂಧಿತನನ್ನು ಹರಿಯಾಣ ಮೂಲದ ವಿಶಾಲ್ ಯಾದವ್ ಎಂದು ಗುರುತಿಸಲಾಗಿದೆ. ಈತ ನೌಕಾಪಡೆಯ ಕೇಂದ್ರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದನು. ಅಧಿಕಾರಿಗಳ ಪ್ರಕಾರ, ಈತ ಹಲವು ವರ್ಷಗಳಿಂದ “ಪ್ರಿಯಾ ಶರ್ಮಾ” ಎಂದು ಗುರುತಿಸಿಕೊಂಡಿದ್ದ ಪಾಕಿಸ್ತಾನದ ಐಎಸ್‌ಐ ಏಜೆಂಟ್ ಮಹಿಳೆಗೆ ಮಾಹಿತಿ ಲೀಕ್ ಮಾಡುತ್ತಿದ್ದನು. ಈ ಮಾಹಿತಿಗೆ ಪ್ರತಿಯಾಗಿ ಹಣವನ್ನು ಪಡೆದುಕೊಂಡಿದ್ದನು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.
“ಆಪರೇಷನ್ ಸಿಂಧೂರ” ಸೇರಿದಂತೆ ಹಲವಾರು ಕಾರ್ಯಾಚರಣೆಗಳ ರಹಸ್ಯ ಮಾಹಿತಿ ಯಾದವ್ ಹಂಚಿಕೊಂಡಿದ್ದನು. ಈ ಆರೋಪದ ಬಗ್ಗೆ ಭದ್ರತಾ ಸಂಸ್ಥೆಗಳು ವಿಶಾಲ್‌ನ ಮೊಬೈಲ್ ಪರಿಶೀಲಿಸಿದಾಗ ಸಾಕಷ್ಟು ಪುರಾವೆಗಳು ಲಭಿಸಿವೆ. ಸಾಮಾಜಿಕ ಮಾಧ್ಯಮದ ಮೂಲಕ ಈ ಸಂಪರ್ಕ ನಡೆದಿದ್ದು, ಅದು ಐಎಸ್‌ಐಯ ತಂತ್ರದ ಭಾಗವಾಗಿ ಪರಿಣಮಿಸಿದೆ.
ಈ ಕುರಿತು ವಿವರಣೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ವಿಷ್ಣುಕಾಂತ್ ಗುಪ್ತಾ, “ಸಾಮಾಜಿಕ ಜಾಲತಾಣಗಳನ್ನು ಬಳಸಿ ಐಎಸ್‌ಐ ಕಾರ್ಯಕರ್ತರು ಭಾರತೀಯ ಸಿಬ್ಬಂದಿಗಳನ್ನು ಬಲೆಗೆ ಬೀಳಿಸುತ್ತಿದ್ದಾರೆ. ಯಾವುದೇ ಅನುಮಾನಾಸ್ಪದ ಸಂಪರ್ಕದ ಬಗ್ಗೆ ಸಾರ್ವಜನಿಕರು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಜ್ಯೋತಿ ಮಲ್ಲೋತ್ರಾ ಎಂಬ ಯೂಟ್ಯೂಬರ್ ರನ್ನು ಈ ರೀತಿಯ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು.