
ಸುಂಕದ ಯುದ್ಧದ ನಡುವೆ ಭಾರತ ಮತ್ತು ಅಮೆರಿಕದ ಸಂಬಂಧ ಹಳಸಿದೆ ಎಂಬ ಊಹಾಪೋಹಗಳಿದ್ದರೂ, ಇತ್ತೀಚಿನ ಬೆಳವಣಿಗೆಗಳು ಎರಡೂ ರಾಷ್ಟ್ರಗಳು ತಮ್ಮ ಸಂಬಂಧವನ್ನು ಮತ್ತೆ ಉತ್ತಮಗೊಳಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ತೋರಿಸುತ್ತವೆ. ಇದಕ್ಕೆ ಪೂರಕವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಮೋದಿ ಅವರು ಕೂಡಲೇ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಂಪ್ ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ, “ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಮಾತುಕತೆಗಳು ನಡೆಯುತ್ತಿರುವುದು ಸಂತೋಷದ ವಿಷಯ. ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿ ಅವರೊಂದಿಗೆ ಮಾತಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಮಹಾನ್ ದೇಶಗಳಿಗೆ ಒಂದು ಯಶಸ್ವಿ ತೀರ್ಮಾನಕ್ಕೆ ಬರುವುದು ಕಷ್ಟವಾಗದು ಎಂಬ ವಿಶ್ವಾಸವಿದೆ” ಎಂದು ಬರೆದಿದ್ದರು.
ಟ್ರಂಪ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಭಾರತ ಮತ್ತು ಅಮೆರಿಕ ನಿಕಟ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಎರಡೂ ದೇಶಗಳ ಪಾಲುದಾರಿಕೆಯ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತವೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕಾರ್ಯನಿರ್ವಹಿಸುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ನಮ್ಮ ಎರಡೂ ದೇಶಗಳ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆಯು ಭಾರತ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂಬುದನ್ನು ಸೂಚಿಸುತ್ತದೆ. ಸುಂಕಗಳ ಮೇಲಿನ ವಿವಾದಗಳು ಮತ್ತು ವ್ಯಾಪಾರ ಅಡೆತಡೆಗಳ ಹೊರತಾಗಿಯೂ, ಈ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಸ್ನೇಹ ಮತ್ತು ರಾಜಕೀಯ ಸಹಕಾರವು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.