
ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ನಡುವೆಯೇ, ಭಾರತ ಮತ್ತು ರಷ್ಯಾ ದೇಶಗಳು ತಮ್ಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಮೂಲಕ, ಟ್ರಂಪ್ ಅವರ ಆರ್ಥಿಕ ಒತ್ತಡಕ್ಕೆ ಭಾರತವು ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ.
ಅಲ್ಯೂಮಿನಿಯಂ, ರಸಗೊಬ್ಬರ, ರೈಲ್ವೇ ಸಾರಿಗೆ, ಗಣಿಗಾರಿಕೆ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ವೃದ್ಧಿಸಲು ಈ ಒಪ್ಪಂದ ಸಹಿ ಮಾಡಲಾಗಿದೆ. ದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ಭಾರತ-ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದಲ್ಲಿ ಈ ಒಡಂಬಡಿಕೆಗೆ ಅಂತಿಮ ರೂಪ ನೀಡಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತದ ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ನಷ್ಟವನ್ನು ಭರಿಸಲು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಟ್ರಂಪ್ ಅವರ ಬೆದರಿಕೆಗೆ ತಿರುಗೇಟು ನೀಡಿದ್ದಾರೆ. ಈ ಕ್ರಮವು ಭಾರತವು ತನ್ನ ವ್ಯಾಪಾರ ತಂತ್ರಗಳನ್ನು ವೈವಿಧ್ಯಗೊಳಿಸುತ್ತಿದ್ದು, ರಷ್ಯಾದಂತಹ ಪ್ರಮುಖ ಮಿತ್ರ ರಾಷ್ಟ್ರಗಳೊಂದಿಗೆ ತನ್ನ ಆರ್ಥಿಕ ಮತ್ತು ಕೈಗಾರಿಕಾ ಸಂಬಂಧಗಳನ್ನು ಬಲಪಡಿಸುತ್ತಿದೆ ಎಂಬುದನ್ನು ತೋರಿಸುತ್ತದೆ.