
ಹೊಸದಿಲ್ಲಿ: ಇರಾನ್ ವಿರುದ್ಧದ ಯುದ್ಧದ ಅಬ್ಬರ ಜೋರಾಗಿರುವ ನಡುವೆಯೇ, ಅಮೆರಿಕವು ಭಾರತದ ನೌಕಾ ನೆಲೆಗಳನ್ನು ಬಳಸುತ್ತಿದೆ ಎಂಬ ಅಂತಾರಾಷ್ಟ್ರೀಯ ವರದಿಗಳನ್ನು ಭಾರತ ಸರ್ಕಾರವು ಬಲವಾಗಿ ತಳ್ಳಿಹಾಕಿದೆ. ಅಮೆರಿಕದ ಮಾಜಿ ಸೇನಾ ಅಧಿಕಾರಿ ನೀಡಿದ್ದ ಈ ಹೇಳಿಕೆಯು ಸಂಪೂರ್ಣ ‘ಸುಳ್ಳು ಮತ್ತು ಕಟ್ಟುಕಥೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ.
ಅಮೆರಿಕ ಮೂಲದ ‘ಚಾನೆಲ್ ಒನ್ ಅಮೇರಿಕಾ ನ್ಯೂಸ್ ನೆಟ್‌ವರ್ಕ್’ (OAN) ಗೆ ನೀಡಿದ ಸಂದರ್ಶನವೊಂದರಲ್ಲಿ ಅಮೆರಿಕದ ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್, “ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕದ ನೆಲೆಗಳು ಹಾನಿಗೊಳಗಾಗಿವೆ, ಹೀಗಾಗಿ ಅಮೆರಿಕದ ನೌಕಾಪಡೆಯು ಭಾರತೀಯ ಬಂದರುಗಳನ್ನು ಅವಲಂಬಿಸಿದೆ” ಎಂಬ ಅಚ್ಚರಿಯ ಹೇಳಿಕೆ ನೀಡಿದ್ದರು. ಈ ವಿಡಿಯೋ ತುಣುಕುಗಳು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ಫ್ಯಾಕ್ಟ್‌ಚೆಕ್ ಘಟಕವು, ಇಂತಹ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದೆ. “OAN ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ವರದಿಯು ನಕಲಿ ಹಾಗೂ ಆಧಾರರಹಿತವಾಗಿದೆ. ಇಂತಹ ಸುಳ್ಳು ಮಾಹಿತಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು” ಎಂದು ಎಕ್ಸ್ (X) ಮೂಲಕ ಎಚ್ಚರಿಕೆ ನೀಡಿದೆ. ಇನ್ನು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತವು ಆತಂಕ ವ್ಯಕ್ತಪಡಿಸಿದ್ದು, ಎರಡೂ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳಬೇಕು ಮತ್ತು ನಾಗರಿಕರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.



































