
ದೆಹಲಿ/ಇಸ್ಲಾಮಾಬಾದ್, ಮೇ 14: ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಗಡಿ ಉದ್ವಿಗ್ನತೆಯ ನಡುವೆ, ಇದೀಗ ರಾಜತಾಂತ್ರಿಕ ಹಂಗಾಮೆ ಕೂಡ ಭುಗಿಲೆದ್ದಿದೆ. ಇತ್ತೀಚಿನ ನಾಲ್ಕು ದಿನಗಳಲ್ಲಿ ಗಡಿಭಾಗದಲ್ಲಿ ಸಧೃಢ ಸೇನಾ ಚಟುವಟಿಕೆಗಳ ಪೈಪೋಟಿಯ ಬಳಿಕ, ಮಂಗಳವಾರ ಎರಡು ರಾಷ್ಟ್ರಗಳೂ ಪರಸ್ಪರ ರಾಜತಾಂತ್ರಿಕ ಅಧಿಕಾರಿಗಳನ್ನು “persona non grata” (ಸ್ವೀಕಾರಾರ್ಹವಲ್ಲದ ವ್ಯಕ್ತಿ) ಎಂದು ಘೋಷಿಸಿ ದೇಶದಿಂದ ಹಿಂಪಡುವಂತೆ ಆದೇಶಿಸಿವೆ.
ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಯಂತೆ, ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಅಧಿಕಾರಿ, ತಮ್ಮ ಅಧಿಕೃತ ಸ್ಥಾನಮಾನಕ್ಕೆ ವಿರುದ್ಧವಾಗಿ ಬೇಹುಗಾರಿಕೆ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ, ಅವರನ್ನು ದೇಶದಿಂದ ಹೊರಹಾಕಲಾಗುತ್ತಿದೆ. ಅವರು 24 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕು ಎಂಬ ಸೂಚನೆ ನೀಡಲಾಗಿದೆ.
ಭಾರತದ ಈ ಕ್ರಮಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಇಲಾಖೆ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಅಧಿಕಾರಿಯನ್ನು ಕರೆಸಿ, ಅದೇ ರೀತಿಯ ಆರೋಪದ ಮೇರೆಗೆ ಅವರನ್ನು ಕೂಡ persona non grata ಎಂದು ಘೋಷಿಸಿದೆ.
ಈ ಬೆಳವಣಿಗೆ, ಈಗಾಗಲೇ ಗಡಿ ಪ್ರಾಂತ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗೆ ಮತ್ತಷ್ಟು ತೀವ್ರತೆ ನೀಡಿದ್ದು, ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಬಿಕ್ಕಟ್ಟಿನ ಹಾದಿ ತಲುಪಿರುವಂತಾಗಿದೆ.