
ಗಣಿತನಗರ: ನಾವು ಬದುಕಿನಲ್ಲಿ ಸಾಧನೆ ಮಾಡಿದರೂ ಸಹ ಬದುಕು ದೇಶಕ್ಕೆ ಸಮರ್ಪಿತವಾಗಿರಲಿ ಎಂದು ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ನುಡಿದರು.

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ ಮಾಲಿಕೆ 38’ರಲ್ಲಿ ‘ಕಾರ್ಗಿಲ್ ವಿಜಯ ದಿವಸ’ದ ಶುಭ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ‘ಬಹುರತ್ನ ಪ್ರಸವೀ ಭಾರತೀ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ನಮ್ಮ ಬದುಕು ಸಮಾಜಕ್ಕೆ ಸಮರ್ಪಿತವಾಗಿರಲಿ, ಒಳ್ಳೆಯ ಆದರ್ಶದ ಅಡಿಗಲ್ಲಿನ ಮೇಲೆ ನಮ್ಮ ಭವಿಷ್ಯವನ್ನು ನಾವು ಕಟ್ಟಿಕೊಳ್ಳಬೇಕು. ಭಾರತವನ್ನು ಬೆಳಗಿಸುವಂತಹ ಮುತ್ತು ರತ್ನಗಳು ನಾವಾಗಬೇಕು. ಅದ್ಭುತ ಸೈನಿಕ ಪರಂಪರೆ ನಮ್ಮದು. ನಮ್ಮ ಸೈನಿಕರೇ ನಮಗೆ ಸ್ಫೂರ್ತಿ ಎಂದು ನುಡಿಯುತ್ತಾ, ಕಾರ್ಗಿಲ್ ವಿಜಯದಲ್ಲಿ ಬಲಿದಾನಗೈದ ವೀರ ಯೋಧರ ಯಶೋಗಾಥೆಯನ್ನು ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಮತ್ತು ಶ್ರೀಮತಿ ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಮುಖ್ಯಸ್ಥ ಶ್ರೀ ಸಂದೀಪ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪ್ರಜ್ವಲ್ ಕುಲಾಲ್ ನಿರೂಪಿಸಿ ವಂದಿಸಿದರು.
