
ನವದೆಹಲಿ: ಈ ತಿಂಗಳು ಭಾರತವು ಅಮೆರಿಕದಿಂದ ಕಚ್ಛಾ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆಪ್ಲರ್ ದತ್ತಾಂಶದ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ಭಾರತವು ದಿನಕ್ಕೆ ಬರೋಬ್ಬರಿ 5,40,000 ಬ್ಯಾರಲ್ ಕಚ್ಛಾ ತೈಲವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದ್ದು, 2022ರ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಭಾರತದ ಈ ನಡೆಯಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಾಪ ತಣ್ಣಗಾಗುವ ನಿರೀಕ್ಷೆ ಇದೆ.
ಅಮೆರಿಕದಿಂದ ತೈಲ ಆಮದು ಹೆಚ್ಚಿಸುವ ಈ ಕ್ರಮದಿಂದ ಭಾರತವು ಏಕಕಾಲದಲ್ಲಿ ಎರಡು ಪ್ರಮುಖ ಗುರಿಗಳನ್ನು ಸಾಧಿಸುತ್ತಿದೆ:
- ಆಮದು ಮೂಲಗಳ ವಿಸ್ತರಣೆ: ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ರಷ್ಯಾದ ಪಾಲು ಅತಿಹೆಚ್ಚು ಇತ್ತು. ಅಮೆರಿಕದಿಂದ ಖರೀದಿ ಹೆಚ್ಚಿಸುವ ಮೂಲಕ ಆಮದು ಮೂಲಗಳನ್ನು ವಿಸ್ತರಿಸಿದಂತಾಗಿದೆ.
- ರಾಜಕೀಯ ಸಮತೋಲನ: ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಗೊಳಿಸುವುದಾಗಿದೆ.
ರಷ್ಯಾದ ತೈಲಕ್ಕೆ ಭಾರತ ಕೈಹಾಕಲು ಮುಖ್ಯ ಕಾರಣ ಅಗ್ಗದ ಬೆಲೆಯಾಗಿತ್ತು. ಇದೀಗ ಅಮೆರಿಕದ ಡಬ್ಲ್ಯುಟಿಐ (WTI) ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗಿರುವುದರಿಂದ, ಭಾರತೀಯ ತೈಲ ಕಂಪನಿಗಳು ಅಮೆರಿಕದ ತೈಲಕ್ಕೂ ಕೈಹಾಕಿವೆ. ವರ್ಷದ ಹಿಂದೆ WTI ಯಿಂದ ದಿನಕ್ಕೆ 3 ಲಕ್ಷ ಬ್ಯಾರಲ್ ತೈಲ ಪಡೆಯುತ್ತಿದ್ದ ಭಾರತ, ಈಗ ಅದನ್ನು 4-5 ಲಕ್ಷ ಬ್ಯಾರಲ್‌ಗೆ ಏರಿಸಿದೆ.
ರಷ್ಯಾ ಪಾಲು ಯಥಾಸ್ಥಿತಿ
ಅಮೆರಿಕದ ತೈಲ ಖರೀದಿಯನ್ನು ಭಾರತ ಹೆಚ್ಚಿಸುತ್ತಿದೆಯಾದರೂ, ರಷ್ಯಾದಿಂದ ತೈಲ ಪಡೆಯುವುದನ್ನು ಕಡಿಮೆಗೊಳಿಸಿಲ್ಲ ಎನ್ನುವುದು ಗಮನಾರ್ಹ. ಭಾರತದ ಒಟ್ಟಾರೆ ತೈಲ ಆಮದಿನ ಮೂರನೇ ಒಂದು ಭಾಗವು ರಷ್ಯಾದಿಂದಲೇ ಮುಂದುವರಿಯಲಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ಸಹ ಭಾರತದ ಟಾಪ್-3 ತೈಲ ಪೂರೈಕೆದಾರರಲ್ಲಿ ಮುಂದುವರಿಯಲಿವೆ.













