
ಉಡುಪಿ : ಏ.22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಅಮಾಯಕ ಭಾರತೀಯ ಪ್ರವಾಸಿಗರ ಧರ್ಮ ಕೇಳಿ ಹತ್ಯಾಕಾಂಡ ನಡೆಸಿರುವ ಪಾಕಿಸ್ತಾನ ಪ್ರಯೋಜಿತ ಉಗ್ರರಿಗೆ ಹಾಗೂ ಬೆಂಬಲಿಗರಿಗೆ ಭಾರತ ತಕ್ಕ ಶಾಸ್ತಿಯನ್ನು ಮಾಡಿದೆ. ‘ಸಿಂಧೂರ’ ಅಳಿಸಿದವರಿಗೆ ‘ಆಪರೇಷನ್ ಸಿಂಧೂರ’ ಮೂಲಕ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ಭಾರತೀಯರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸಂಭ್ರಮಿಸುವ ಅತ್ಯಂತ ಸಂತಸದ ಕ್ಷಣ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಕಾಶ್ಮೀರದ ಪಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ‘ಆಪರೇಷನ್ ಸಿಂಧೂರ’ ಮೂಲಕ ಭಾರತ ಕೈಗೊಂಡಿರುವ ಐತಿಹಾಸಿಕ ಕ್ರಮವನ್ನು ಅಭಿನಂದಿಸಿ ಮಾತನಾಡಿದರು.

ಇಂತಹ ದಿಟ್ಟ ನಡೆಗಳಿಂದಲೇ ನರೇಂದ್ರ ಮೋದಿ ಅವರು ಇಡೀ ಜಗತ್ತೇ ಮೆಚ್ಚುವಂತಹ ಪ್ರಧಾನಿ ಎಂದೆನಿಸಿಕೊಂಡಿದ್ದಾರೆ. ದೇಶವಾಸಿಗಳ ಮೇಲಿನ ಪ್ರೀತಿ, ಗೌರವ ಹಾಗೂ ಬದ್ಧತೆಯಿಂದ ಇಂತಹ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಶತ್ರು ರಾಷ್ಟ್ರ ಪಾಕಿಸ್ತಾನ ಇಂತಹ ದುಷ್ಟ ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಿ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ತಪ್ಪಿದಲ್ಲಿ ಇದಕ್ಕಿಂತಲೂ ಘೋರ ಪರಿಸ್ಥಿತಿಯನ್ನು ಎದುರಿಸುವ ಕಾಲ ಬಂದೊದಗಬಹುದು.
ದೇಶದ ಸುರಕ್ಷತೆ, ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹಾಗೂ ಉಗ್ರರ ವಿರುದ್ಧ ದೇಶವಾಸಿಗಳ ಆಕ್ರೋಶ ತಣಿಸುವ ನಿಟ್ಟಿನಲ್ಲಿ ನಡೆದ ‘ಆಪರೇಷನ್ ಸಿಂಧೂರ್’ ಯಶಸ್ವಿಗೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಕೆಚ್ಚೆದೆಯ ಭಾರತೀಯ ಸೇನಾ ಪಡೆಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ದೇಶದ ಭದ್ರತೆ ಮತ್ತು ಸುರಕ್ಷತೆಗೆ ಕಟಿಬದ್ಧರಾಗಿ ಹೋರಾಡುವ ವೀರ ಯೋಧರಿಗೆ 140 ಕೋಟಿ ಭಾರತೀಯರ ಪ್ರಾರ್ಥನೆ, ಶುಭ ಹಾರೈಕೆ ಸದಾ ಶ್ರೀರಕ್ಷೆಯಾಗಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಉಪಾಧ್ಯರಾದ ಕಿರಣ್ ಕುಮಾರ್ ಬೈಲೂರು, ಪೆರಣoಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಪದಾಧಿಕಾರಿಗಳಾದ ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರಿಯದರ್ಶಿನಿ ದೇವಾಡಿಗ, ಅನಿತಾ ಶ್ರೀಧರ್, ದಿಲೇಶ್ ಶೆಟ್ಟಿ, ಶಂಕರ ಅಂಕದಕಟ್ಟೆ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್ ರಾವ್, ಅಭಿರಾಜ್ ಸುವರ್ಣ, ರುಡಾಲ್ಫ್ ಡಿಸೋಜ, ಕರುಣಾಕರ ಶೆಟ್ಟಿ, ವಿವೇಕ್ ಪೈ, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ರಾಜೀವ್ ಕುಲಾಲ್, ರಶ್ಮಿತಾ ಬಿ. ಶೆಟ್ಟಿ, ಸಚಿನ್ ಪೂಜಾರಿ, ಗೋಪಾಲಕೃಷ್ಣ ರಾವ್ ಮಟ್ಟು, ಶರಣ್ ಕುಮಾರ್ ಮಟ್ಟು, ಸತೀಶ್ ಪೂಜಾರಿ ಕುಂದಾಪುರ, ಸುಧೀರ್ ಕೆ.ಎಸ್. ಕುಂದಾಪುರ, ನಾರಾಯಣಮೂರ್ತಿ, ಕೆ.ದಿವಾಕರ ಶೆಟ್ಟಿ ಕಾಪು, ಪ್ರವೀಣ್ ಕುಮಾರ್ ಗುರ್ಮೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲಾ 6 ಮಂಡಲ ಕೇಂದ್ರಗಳಲ್ಲಿ ಸಿಹಿ ಹಂಚಿ ‘ಆಪರೇಷನ್ ಸಿಂಧೂರ್’ನ ಯಶಸ್ವೀ ಕಾರ್ಯಾಚರಣೆಯ ಸಂಭ್ರಮಾಚರಣೆ ನಡೆಸಲಾಯಿತು.