
ಹಿರಿಯಡ್ಕ: ಹಿರಿಯಡ್ಕದ ಮಾಣೈಮಠ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಶ್ರೀ ಆಂಜನೇಯ ಭಜನಾ ಮಂಡಳಿ, ಮಾಣೈ ಎಂಬ ನಾಮಾಂಕಿತದೊಂದಿಗೆ ಹೊಸ ಕುಣಿತ ಭಜನಾ ಮಂಡಳಿಯನ್ನು ಶ್ರೀ ಮುಖ್ಯಪ್ರಾಣ ದೇವರ ಪ್ರಧಾನ ಅರ್ಚಕರಾದ ಶ್ರೀ ಮಾಧವ ಉಪಾಧ್ಯಾಯ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಅವರು ಈ ಹೊಸ ಭಜನಾ ಮಂಡಳಿಗೆ ಶುಭಾಶೀರ್ವಾದ ಮಾಡಿ, ತನ್ನ ಸಹಕಾರದ ಭರವಸೆ ನೀಡಿದರು. ಮಂಡಳಿಯು ಉತ್ತಮವಾಗಿ ದೇವರ ಸೇವೆ ಮಾಡುವ ಮೂಲಕ ಈ ಸ್ಥಳದ ಹೆಸರನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹೇಳಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಉಡುಪಿ ತಾಲೂಕಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮುಖ್ಯಪ್ರಾಣ ದೇವರಿಗೆ ಹೊಸ ಭಜನಾ ಮಂಡಳಿಯಿಂದ ಕುಣಿತ ಭಜನಾ ಸೇವೆ, ರಂಗಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿ ಮಂಡಳಿಗೆ ಶುಭ ಹಾರೈಸಿದರು. ಈ ಭಜನಾ ಮಂಡಳಿಗೆ ಶ್ರೀ ರೋಹಿತ್ ಕಬ್ಯಾಡಿರವರು ಉತ್ತಮವಾಗಿ ತರಬೇತಿ ನೀಡುವ ಮೂಲಕ ಸಜ್ಜುಗೊಳಿಸಿದ್ದರು.
ಈ ಭಜನಾ ಮಂಡಳಿಗೆ ಸಹಕರಿಸಿದ ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಶ್ರೀಮತಿ ಶಶಿಕಲಾರವರನ್ನು ಗೌರವಿಸಲಾಯಿತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಶ್ರೀ ಗೋಕುಲದಾಸ್ ನಾಯಕ್ ಕೊಂಡಾಡಿ, ಶ್ರೀ ಆಂಜನೇಯ ಭಜನಾ ಮಂಡಳಿಯ ಸಂಚಾಲಕರು ಸುಧೀರ್ ನಾಯಕ್, ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಸುಧೀರ್ ನಾಯಕ್, ಉಪಾಧ್ಯಕ್ಷರಾದ ಶ್ರೀಮತಿ ಮಮತ, ಕಾರ್ಯದರ್ಶಿ ಸಾಕ್ಷಿ ಮೂಲ್ಯ, ಜೊತೆ ಕಾರ್ಯದರ್ಶಿ ಗೀತಾ, ಕೋಶಾಧಿಕಾರಿ ನಾಗರತ್ನ, ಜೊತೆ ಕೋಶಾಧಿಕಾರಿ ಅಕ್ಷಯ್ ಆಚಾರ್ಯ, ಊರಿನ ಗಣ್ಯರು, ಹಿರಿಯರು, ಮಂಡಳಿಯ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.