
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪಾಠದ ಗುಣಮಟ್ಟ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಶಾಲಾ ವೇಳೆಯಲ್ಲಿ ಶಿಕ್ಷಕರು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಈ ಆದೇಶದ ಉಲ್ಲಂಘನೆ ಕಂಡುಬಂದಲ್ಲಿ ಆಯಾ ಶಾಲೆಯ ಮುಖ್ಯಶಿಕ್ಷಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡುವುದಾಗಿ ಇಲಾಖೆ ಎಚ್ಚರಿಸಿದೆ.
ಶಿಕ್ಷಕರು ತರಗತಿಗಳಲ್ಲಿ ಮೊಬೈಲ್ ಬಳಸುವುದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಇಲಾಖೆ ಹೊರಡಿಸಿರುವ ಪ್ರಮುಖ ನಿರ್ದೇಶನಗಳು ಇಲ್ಲಿವೆ:
- ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಿ, ಇತರೆ ಎಲ್ಲಾ ಬೋಧಕ ಸಿಬ್ಬಂದಿಗಳು ಪ್ರತಿದಿನ ಪ್ರಾರ್ಥನೆಯ ಬಳಿಕ ತಮ್ಮ ಮೊಬೈಲ್‌ಗಳನ್ನು ಮುಖ್ಯೋಪಾಧ್ಯಾಯರ ಸುಪರ್ದಿಗೆ ಒಪ್ಪಿಸಬೇಕು.
- ತರಗತಿಗಳ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಯಾವುದೇ ಶಾಲೆಯಲ್ಲಿ ಈ ನಿಯಮ ಉಲ್ಲಂಘನೆಯಾದರೆ, ಅದಕ್ಕೆ ಸಂಬಂಧಿಸಿದ ದೂರುಗಳು ಬಂದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ನೇರವಾಗಿ ಜವಾಬ್ದಾರರಾಗಿರುತ್ತಾರೆ.
- ಹೆಚ್ಚಿನ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ಸೂಚಿಸಲಾಗಿದೆ.
ಈ ಆದೇಶದ ಮೂಲಕ ಶಿಕ್ಷಕರು ಬೋಧನೆಯ ಕಡೆಗೆ ಹೆಚ್ಚಿನ ಗಮನಹರಿಸಲು ಮತ್ತು ಶಾಲೆಯಲ್ಲಿ ಶಿಸ್ತು ಕಾಪಾಡಲು ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ.