
ಹುಬ್ಬಳ್ಳಿಯಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಸರಕಾರದಿಂದ ಉಚಿತವಾಗಿ ವಿತರಿಸಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಸಬಾಪೇಟೆ ಠಾಣೆ ಪೊಲೀಸರು 26 ಮಂದಿಯನ್ನು ಬಂಧಿಸಿದ್ದು, ಅವರಲ್ಲಿ 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಳೇ ಗಬ್ಬೂರಿನ ಒಂದು ಗೋದಾಮಿನಲ್ಲಿ ಈ ಪೌಷ್ಟಿಕ ಆಹಾರ ದಾಸ್ತಾನು ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ 329 ಚೀಲಗಳಲ್ಲಿ ಸಂಗ್ರಹಿಸಲಾಗಿದ್ದ 4.84 ಟನ್ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅಲ್ಲದೆ, ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ 3 ಲಕ್ಷ ರೂಪಾಯಿ ಮೌಲ್ಯದ ಬೊಲೆರೊ ವಾಹನವನ್ನೂ ಸಹ ವಶಕ್ಕೆ ಪಡೆಯಲಾಗಿದೆ.
ಗೋದಾಮಿನ ಮಾಲೀಕ ಮೊಹ್ಮದ್ ಗೌಸ್ ಖಲಿಪಾ, ಬಾಡಿಗೆದಾರ ಗೌತಮ್ ಸಿಂಗ್ ಠಾಕೂರ್ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಶಮಿಮಾಬಾನು ಮುಜಾವರ, ಶಮಿಮಾಬಾನು ದಾರುಗಾರ, ಬೇಬಿಆಯಿಶಾ ಕಾರಿಗಾರ, ರೇಷ್ಮಾ ವಡ್ಡೋ, ಶಾಹೀನಾ ಚಕ್ಕೆಹಾರಿ, ಫೈರೋಜಾ ಮುಲ್ಲಾ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾಹಿತಿ ನೀಡಿದ್ದು, ಸರಕಾರ ಪೂರೈಸಿದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಪ್ರಮುಖ ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.