
ಹೈದರಾಬಾದ್ : ಅಕ್ರಮ ಗಣಿಗಾರಿಕೆಯ ಹಿನ್ನೆಲೆಯಲ್ಲಿರುವ ಓಬಳಾಪುರಂ ಮೈನಿಂಗ್ ಕಂಪನಿ (OMC) ಪ್ರಕರಣದಲ್ಲಿ, ಮಾಜಿ ಸಚಿವ ಮತ್ತು ಗಂಗಾವತಿಯ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಅನಂತಪುರ ಜಿಲ್ಲೆ ಓಬಳಾಪುರಂನಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟ ಈ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. ಈ ಅವಧಿಯಲ್ಲಿ 3,400 ಕ್ಕೂ ಹೆಚ್ಚು ದಾಖಲೆಗಳು ಪರಿಶೀಲನೆಗೆ ಒಳಪಡಿಸಿದರೆ, 219 ಸಾಕ್ಷಿಗಳಿಂದ ಜಾರಿ ಸಂಸ್ಥೆಗಳು ಮಾಹಿತಿ ಸಂಗ್ರಹಿಸಿದ್ದವು.
OMC ಕಂಪನಿಯ ಮಾಲೀಕರಾಗಿದ್ದ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಮೂಲಕ ಭಾರೀ ಪ್ರಮಾಣದ ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ನ್ಯಾಯಾಲಯ ಅವರ ವಿರುದ್ಧದ ಆರೋಪಗಳನ್ನು ದೃಢಪಡಿಸಿ 7 ವರ್ಷಗಳ ಶಿಕ್ಷೆ ವಿಧಿಸಿದೆ. ಇದರಿಂದಾಗಿ, ಅವರ ಶಾಸಕರ ಸ್ಥಾನ ಉಳಿಯುವದೋ ಇಲ್ಲವೋ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದೇ ಪ್ರಕರಣದಲ್ಲಿ ಇತರ ಆರೋಪಿಗಳಾದ ವಿಡి. ರಾಜಗೋಪಾಲ್, ಲಿಂಗಾರೆಡ್ಡಿ, ಮತ್ತು ಕೆ. ಮೆಹಫೂಸ್ ಅಲಿ ಖಾನ್ ಸಹ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಅವರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.