
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಶಾಂತಿ ಭಂಗಕ್ಕೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರ ವಿರುದ್ಧ ಎಪ್ರಿಲ್ 19ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಉಜಿರೆ ನಿವಾಸಿಗಳಾದ ಅನಿಲ್ ಅಂತರ, ಮನೋಜ್ ಕುಂಜರ್ಪ, ಪ್ರಜ್ವಲ್ ಗೌಡ, ಪ್ರಭಾಕರ, ಗಣೇಶ್ ಹಾಗೂ ಇತರರ ಮೇಲೆ ದೂರು ದಾಖಲಾಗಿದೆ . ಬೆಳ್ತಂಗಡಿ ಠಾಣೆಯ ಎಸ್‌ಐ ಮುರಳೀಧರ ನಾಯ್ಕ ಕೆ.ಜಿ. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಶಾಂತಿ ಭಂಗಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ.
ಇದಕ್ಕೂ ಮುನ್ನ, ಪುನೀತ್ ಕೆರೆಹಳ್ಳಿ ಅವರು ಉಜಿರೆಗೆ ಬರುವ ಸಾಧ್ಯತೆ ಹಿನ್ನೆಲೆ, ಅವರ ಪ್ರಚೋದನಕಾರಿ ಭಾಷಣದಿಂದ ಶಾಂತಿ ಭಂಗ ಉಂಟಾಗಬಹುದೆಂಬ ಆಧಾರದ ಮೇಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಬಿಎನ್‌ಎಸ್ 2023ರ ಕಲಂ 163ರ (ಬಿ) ಅಡಿಯಲ್ಲಿ ಜಿಲ್ಲೆಯಲ್ಲಿ ಪ್ರವೇಶಿಸದಂತೆ ನಿರ್ಬಂಧಾಜ್ಞೆ ಜಾರಿಗೆ ತಂದಿದ್ದರು.
ಆದರೆ, ಶನಿವಾರ ಸಂಜೆ ಉಜಿರೆಯ ಕಾಲೇಜು ಬಳಿಯ ರಸ್ತೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಸೇರಿ ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ಕೂಟ ಸೇರಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ಶಾಂತಿ ಭಂಗಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.