
ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪೊಲೀಸರ ಕಾರ್ಯಾಚರಣೆ ವೇಳೆ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕೆಂಪು ಬಣ್ಣದ ಬ್ರೀಜಾ ಕಾರಿನಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆ ಹಚ್ಚಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ: ಜುಲೈ 7, 2025 ರಂದು ಬೆಳಿಗ್ಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನವೀನ್ ಬೋರ್ಕರ್ (ತನಿಖೆ) ಅವರಿಗೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಕೆಂಪು ಬಣ್ಣದ ಬ್ರೀಜಾ ಕಾರಿನಲ್ಲಿ ದನಗಳನ್ನು ಕಳವು ಮಾಡಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬೈಂದೂರು ಒತ್ತಿನಣೆ ತಿರುವಿನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತಪಾಸಣೆ ಆರಂಭಿಸಿದರು.
ಬೆಳಿಗ್ಗೆ 6:00 ಗಂಟೆಗೆ ಬೈಂದೂರು ಕಡೆಯಿಂದ ಬಂದ KA-47-M-8960 ನೋಂದಣಿ ಸಂಖ್ಯೆಯ ಕೆಂಪು ಬಣ್ಣದ ಬ್ರೀಜಾ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ, ಕಾರಿನಲ್ಲಿದ್ದವರು ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ಹಿಂಬದಿಯಲ್ಲಿ ಬೇರೆ ವಾಹನಗಳಿದ್ದ ಕಾರಣ ಸಾಧ್ಯವಾಗಲಿಲ್ಲ. ಕೂಡಲೇ ಕಾರನ್ನು ಅಲ್ಲೇ ಬಿಟ್ಟು, ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಇಳಿದು ಓಡಿ ಪರಾರಿಯಾಗಿದ್ದಾರೆ.
ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಅದಕ್ಕೆ ಟಿಂಟ್ ಗ್ಲಾಸ್ ಅಳವಡಿಸಲಾಗಿತ್ತು. ಕಾರಿನ ಡಿಕ್ಕಿಯನ್ನು ತೆರೆದು ನೋಡಿದಾಗ, ಯಾವುದೇ ಪರವಾನಿಗೆ ಪಡೆಯದೆ ನಾಲ್ಕು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಾಲು ಕಟ್ಟಿ, ಒಂದರ ಮೇಲೆ ಒಂದನ್ನು ಹಾಕಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಮಾಂಸ ಮಾಡುವ ಉದ್ದೇಶದಿಂದ ಈ ದನಗಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2025 ಅಡಿಯಲ್ಲಿ ಕಲಂ: 303(2) BNS, 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 (Karnataka Prevention of Cow Slaughter & Cattle Preservation Act 2020), ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ: 11(1)(D), ಹಾಗೂ ಸೆಕ್ಷನ್ 66 ಜೊತೆಗೆ 192 (A) IMV ಕಾಯ್ದೆ ಮತ್ತು CMV ನಿಯಮ 100(2) R/w 177 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.