
ಬೆಂಗಳೂರು: “ಜಾತಿಗಣತಿ ವರದಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಇದೆ” ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅಥವಾ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ್ ಅವರ ಬಳಿ ಸ್ಪಷ್ಟನೆ ಕೇಳಬಹುದೆಂದು ತಿರುಗೇಟು ನೀಡಿದರು.
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಅಶೋಕ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಸುಳ್ಳು ಹೇಳಬಾರದು. ಆಯೋಗವು ಸ್ವಾಯತ್ತ ಸಂಸ್ಥೆ. ವರದಿ ಕ್ಯಾಬಿನೆಟ್‌ಗೆ ಬಂದಾಗಲೇ ತೆರೆದಿದ್ದು, ಅದು ಚಿತ್ರೀಕರಣಗೊಂಡು ದಾಖಲಾಗಿದೆಯೆಂದು” ಡಿಕೆಶಿ ಸ್ಪಷ್ಟಪಡಿಸಿದರು.
ಜಾತಿಗಣತಿ ಅನುಷ್ಠಾನಕ್ಕೆ ಇನ್ನೂ ಒಂದು ವರ್ಷ ಸಮಯ ಬೇಕು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಉತ್ತರಿಸಿದ ಅವರು, “ಇದು ಸಂಪುಟದ ಆಂತರಿಕ ಚರ್ಚೆಯ ವಿಷಯ, ಸಾರ್ವಜನಿಕವಾಗಿ ಮಾತನಾಡುವುದೇ ತಪ್ಪು” ಎಂದರು.
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಡಿಕೆಶಿ ಆಕ್ರೋಶ
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಡಿಕೆಶಿ, “ಇದು ಸಂಪೂರ್ಣ ತಪ್ಪು. ಜನಿವಾರ, ತಾಳಿ, ಓಲೆ ಇವು ಧರ್ಮ ಹಾಗೂ ಪರಂಪರೆಗಳಿಗೆ ಸಂಬಂಧಿಸಿದವು. ಇವುಗಳನ್ನು ಮುಟ್ಟುವುದು ಸರಿಯಲ್ಲ. ಸರ್ಕಾರ ಈ ರೀತಿಯ ವಿಷಯಗಳಿಗೆ ಅವಕಾಶ ನೀಡುವುದಿಲ್ಲ,” ಎಂದರು.
“ಪೊಲೀಸ್ ನೇಮಕಾತಿ ವೇಳೆ ದೇಹ ತಪಾಸಣೆ ಮಾಡುವ ಸಂದರ್ಭ ಇವುಗಳನ್ನು ತೆಗೆಸುವ ವಿಧಾನ ಇದೆ. ಆದರೆ ಶಾಲೆ-ಕಾಲೇಜುಗಳಂತಹ ಶಿಕ್ಷಣ ಕ್ಷೇತ್ರದಲ್ಲಿ ಇದು ಅಪ್ರಸ್ತುತ. ಇತ್ತೀಚೆಗೆ ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ನಕಲು ಮಾಡಿರುವ ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಮಾತ್ರ ಭದ್ರತಾ ಕ್ರಮಗಳಿವೆ. ಆದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ನಡೆಯಬಾರದು.”ಎಂದು ಹೇಳಿದರು.