
ಮಂಗಳೂರು, ಏಪ್ರಿಲ್ 29 – ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೊಸ ಹೇಳಿಕೆ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಪಹಲ್ಗಾಮ್ ಉಗ್ರ ದಾಳಿ ಸಂದರ್ಭದಲ್ಲಿ ಹಿಂದೂಗಳು ತಲ್ವಾರ್ ತೋರಿಸಿದ್ದರೆ, ಕಥೆಯೇ ಬೇರೆಯಾಗುತ್ತಿತ್ತು ಎಂಬ ಹೇಳಿಕೆಯ ಜೊತೆಗೆ, ಹೆಣ್ಣುಮಕ್ಕಳು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿ ಇಟ್ಟುಕೊಳ್ಳಬೇಕು ಎಂಬ ಸಲಹೆ ಕೂಡ ನೀಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಅಕ್ರಮಣದ ಸಂದರ್ಭ ‘ಬೇಡ’ ಎಂದು ಕೋರಿದರೆ ನಿಮ್ಮ ಕಥೆ ಮುಗಿಯಿತು. ಬದಲಾಗಿ ಚೂರಿ ತೋರಿಸಿ, ‘ಬಾ’ ಎಂದು ಸವಾಲು ಹಾಕಿ, ಆಕ್ರಮಣಕಾರಿಗಳು ಹೆದರಿ ಓಡುತ್ತಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮುಂದುವರೆದು, “ವ್ಯಾನಿಟಿ ಬ್ಯಾಗ್‌ನಲ್ಲಿ ಪೌಡರ್, ಬಾಚಣಿಗೆ ಮಾತ್ರವಲ್ಲ, 6 ಇಂಚಿನ ಚೂರಿಯನ್ನೂ ಇಡಬಹುದು. ಅದಕ್ಕೆ ಲೈಸೆನ್ಸ್ ಬೇಕಾಗಿಲ್ಲ. ಈ ಮೂಲಕ ಮಹಿಳೆಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.
ಪ್ರಭಾಕರ ಭಟ್ ಅವರು ಪಹಲ್ಗಾಮ್ ದಾಳಿಯ ಕುರಿತು ಹೇಳಿದ, “ಆ ಸಮಯದಲ್ಲಿ ಹಿಂದೂಗಳು ತಲ್ವಾರ್ ತೋರಿಸಿದ್ದರೆ, ಕಥೆಯೇ ಬೇರೆಯಾಗುತ್ತಿತ್ತು” ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ. ಕೆಲವರು ಈ ಹೇಳಿಕೆಯನ್ನು ಸ್ವರಕ್ಷಣೆಯ ಹಿತದೃಷ್ಟಿಯಿಂದ ನೋಡಿ ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಅದನ್ನು ದ್ವೇಷ ಸೃಷ್ಟಿಸುವ ಹಾಗೂ ಸಾಮಾಜಿಕ ಉದ್ವಿಗ್ನತೆಯ ಮಾತು ಎಂದು ತೀವ್ರವಾಗಿ ಖಂಡಿಸಿದ್ದಾರೆ.