
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಅನಾವಶ್ಯಕ ಬಂದ್ ಕರೆಯನ್ನು ತೀವ್ರ ಟೀಕಿಸಿದರು. ತೀರ್ಥಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಯಾರೋ ಎಲ್ಲೋ ಕುತ್ಕೊಂಡು ಬಂದ್ ಕರೆ ಕೊಟ್ಟರೆ ಕರ್ನಾಟಕ ಬಂದ್ ಆಗುವುದಿಲ್ಲ. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಇದೆ, ಇದು ನಡೆಯಬಾರದು” ಎಂದು ಹೇಳಿದರು.
“ನಾಲ್ಕು ಜನ ಪುಂಡರು ಏನಾದರೂ ಮಾಡಿದರೆ ಅದನ್ನು ಇಡೀ ಸಮುದಾಯಕ್ಕೆ ಹೊರೆ ಹಾಕಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರ, ಭಾರತ ಮತ್ತು ಪಾಕಿಸ್ತಾನವೋ? ಈ ರೀತಿಯ ಡಿವೈಡ್ ಅಂಡ್ ರೂಲ್ ನೀತಿಯನ್ನೇ ಕೆಲವರು ಅನುಸರಿಸುತ್ತಿದ್ದಾರೆ” ಎಂದು ಅವರು ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿದರು.
ಗೃಹ ಖಾತೆ ಬದುಕಿದೆಯಾ? – ಆರಗ ಜ್ಞಾನೇಂದ್ರ ತೀವ್ರ ಪ್ರಶ್ನೆ
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು. “ನಮ್ಮ ಪೊಲೀಸರನ್ನೇ ರಕ್ಷಿಸಲು ಮಿಲಿಟರಿ ತರುವ ಪರಿಸ್ಥಿತಿ ಬಂದಿದೆ. ಮೈಸೂರಿನಲ್ಲಿ ಐಪಿಎಸ್ ಅಧಿಕಾರಿಯ ವಾಹನ ಜಖಂ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಮರೀಚಿಕೆಯಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
“ಮಾದಕ ವಸ್ತುಗಳ ಕಳ್ಳಸಾಗಣೆ, ರಿಯಲ್ ಎಸ್ಟೇಟ್ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆಯೇ ಹಾಳಾಗುತ್ತಿದೆ” ಎಂದು ಅವರು ಆರೋಪಿಸಿದರು. “ಇತ್ತೀಚಿನ ಸರ್ಕಾರದ ನಿರ್ಲಕ್ಷ್ಯದಿಂದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಅಸಾಧ್ಯ ಸ್ಥಿತಿಗೆ ತಲುಪಿದ್ದಾರೆ” ಎಂದು ಅವರು ಕಿಡಿಕಾರಿದರು.