spot_img

“ಬಿಜೆಪಿಗೆ ಧೈರ್ಯವಿದ್ದರೆ ದಲಿತರನ್ನು ಪ್ರಧಾನಿ ಮಾಡಿ”: ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ಸವಾಲು!

Date:

spot_img

ಬೆಂಗಳೂರು : ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಿವೃತ್ತಿಯ ಕುರಿತು ಇತ್ತೀಚೆಗೆ ನೀಡಿದ ಸೂಚನೆಯನ್ನು ಉಲ್ಲೇಖಿಸಿ, ಬಿಜೆಪಿಗೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ದಲಿತ ನಾಯಕರನ್ನು ಹೆಸರಿಸುವಂತೆ ಸವಾಲು ಹಾಕಿದ್ದಾರೆ.

“ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ”

ಗುರುವಾರ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, “ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರು ಆಗಬೇಕೆನ್ನುವುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ. ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಅವರ ಹೇಳಿಕೆ ಅವರ ಅಜ್ಞಾನ, ಆತ್ಮವಂಚನೆ ಹಾಗೂ ದುರಹಂಕಾರವನ್ನು ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. “ವಿಜಯೇಂದ್ರ ಅವರಿಗೆ ಓದುವ ಅಭ್ಯಾಸ ಇದ್ದರೆ, ಈ ದೇಶದ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಭಾರತೀಯ ಜನತಾ ಪಕ್ಷ ಯಾವ ಕಾಲದಲ್ಲಿ ಹೇಗೆಲ್ಲಾ ನಡೆಸಿಕೊಂಡಿದೆ ಎಂಬ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ” ಎಂದು ಕಿವಿಮಾತು ಹೇಳಿದ್ದಾರೆ.

“ದಲಿತ ನಾಯಕ ಗೋವಿಂದ್ ಕಾರಜೋಳರನ್ನು ಸಿಎಂ ಅಭ್ಯರ್ಥಿ ಮಾಡಿ!”

ಹಿಂದುಳಿದ ನಾಯಕರನ್ನು ಬಿಜೆಪಿ ನಡೆಸಿಕೊಳ್ಳುವ ರೀತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ದಿವಂಗತ ಎಸ್. ಬಂಗಾರಪ್ಪನವರ ರಾಜಕೀಯ ಜೀವನ ಇದಕ್ಕೆ ಸಾಕ್ಷಿ ಎಂದರು. “ಬಂಗಾರಪ್ಪನವರನ್ನು ಬಿ.ಎಸ್. ಯಡಿಯೂರಪ್ಪನವರು ಮುಗಿಸಿದರೆ, ಅವರ ಮಗ ಕುಮಾರ್ ಬಂಗಾರಪ್ಪನವರ ರಾಜಕೀಯವನ್ನು ನೀವು (ವಿಜಯೇಂದ್ರ) ಮುಗಿಸಲು ಹೊರಟಿದ್ದೀರಿ. ಇದರ ವಿವರವನ್ನು ಅವರು ನೀಡುತ್ತಲೇ ಇದ್ದಾರೆ” ಎಂದು ಹೇಳಿದರು.

“ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ. ನಿಮಗೆ ಅನುಕೂಲವಾಗಲೆಂದು ಆ ಹೆಸರನ್ನು ನಾನೇ ಸೂಚಿಸುತ್ತೇನೆ. ದಲಿತ ನಾಯಕ ಗೋವಿಂದ್ ಕಾರಜೋಳ ಅವರು ಇತ್ತೀಚೆಗೆ ನಿಮ್ಮ ಸಂಗಕ್ಕೆ ಬಿದ್ದು ಏನೇನೋ ಮಾತನಾಡುತ್ತಿದ್ದಾರೆ. ಆದರೆ ನನ್ನ ಸಹದ್ಯೋಗಿಯಾಗಿದ್ದ ಅವರು ಮೂಲತಃ ಸಜ್ಜನ ವ್ಯಕ್ತಿ. ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ದಮ್ಮು ತಾಕತ್ ಇದ್ದರೆ ಕಾರಜೋಳ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಬಿಡಿ” ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

“ದಲಿತ ಪ್ರಧಾನಮಂತ್ರಿ ಮಾಡಲು ಇದೊಂದು ಸದಾವಕಾಶ”

ಮಲ್ಲಿಕಾರ್ಜುನ ಖರ್ಗೆ ಕುರಿತು ಮಾತನಾಡಿದ ಅವರು, “ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಮಾತ್ರವಲ್ಲ, ದೇಶ ಮೆಚ್ಚುವ ಒಬ್ಬ ಮುತ್ಸದ್ದಿ ನಾಯಕ. ಶ್ರದ್ಧೆ, ಶ್ರಮ ಮತ್ತು ಜನಪರ ಕಾಳಜಿ ಮೂಲಕ ಅವರು ನಾಯಕರಾಗಿ ಬೆಳೆದಿದ್ದಾರೆಯೇ ಹೊರತು ಎಂದೂ ದಲಿತ ಕಾರ್ಡ್ ಪ್ರದರ್ಶಿಸಿ ರಾಜಕೀಯ ಮಾಡಿಲ್ಲ. ಅವರ ಬೆಳವಣಿಗೆಗೆ ಯಾರ ಶಿಫಾರಸುಗಳ ಅಗತ್ಯವೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರು ಆಗಬೇಕೆನ್ನುವುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ. ಅದರ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನೀವು ಯೋಚಿಸಬೇಕಾಗಿರುವುದು ನಿಮ್ಮ ಪಕ್ಷದ ಬಗ್ಗೆ” ಎಂದಿದ್ದಾರೆ.

“ಎಪ್ಪತ್ತೈದು ವರ್ಷ ತುಂಬಿರುವ ನರೇಂದ್ರ ಮೋದಿ ಅವರ ಪದಚ್ಯುತಿಯ ಸೂಚನೆಯನ್ನು ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿದ್ದಾರೆ. ದಲಿತ ಪ್ರಧಾನಮಂತ್ರಿಯನ್ನು ಮಾಡಲು ಬಿಜೆಪಿಗೆ ಇದೊಂದು ಸದಾವಕಾಶ. ಆ ಪ್ರಯತ್ನ ನಿಮ್ಮಿಂದಲೇ ಶುರುವಾಗಲಿ, ಬೇರೆಯವರಿಗೆ ಬೋಧನೆ ಮಾಡುವ ಬದಲಿಗೆ ಬಿಜೆಪಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಒಬ್ಬ ದಲಿತ ನಾಯಕನನ್ನು ನೀವೇ ಮೊದಲೇ ಸೂಚಿಸಿ ನಿಮ್ಮ ದಲಿತ ಪ್ರೇಮವನ್ನು ಸಾಬೀತುಪಡಿಸಿ. ಆ ಹೆಸರುಗಳು ಗೋವಿಂದ ಕಾರಜೋಳ ಅವರೋ, ಛಲವಾದಿ ನಾರಾಯಣಸ್ವಾಮಿ ಅವರದ್ದಾಗಿದ್ದರೆ ಅವರನ್ನು ಅಭಿನಂದಿಸುವಲ್ಲಿ ನಾನು ಮೊದಲಿಗನಾಗುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇರುವತ್ತೂರು ಕೊಳಕೆ ಶಾಲಾ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗದಿಂದ ಕೊಡೆ, ಕಲಿಕಾ ಸಾಮಗ್ರಿ ವಿತರಣೆ

ಇರುವತ್ತೂರು ಕೊಳಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗ, ಕುಂದಾಪುರ ವತಿಯಿಂದ ಸುಮಾರು ₹20,000 ಮೌಲ್ಯದ ಕೊಡೆಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಂಧ್ಯಾ ರಮೇಶ್ ತಿಳಿಸಿದ್ದಾರೆ.

ಫೋನ್ ಪಾಸ್‌ವರ್ಡ್ ನೀಡುವಂತೆ ಪತ್ನಿಗೆ ಒತ್ತಾಯಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು!

ಪತ್ನಿಯ ಮೊಬೈಲ್ ಫೋನ್ ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುವುದು ಆಕೆಯ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ

ರೋಲ್ಸ್ ರಾಯ್ಸ್‌ನಲ್ಲಿ ಮಂಗಳೂರಿನ ರಿತುಪರ್ಣಗೆ ಪ್ರತಿಷ್ಠಿತ ಉದ್ಯೋಗ: ವರ್ಷಕ್ಕೆ ₹72 ಲಕ್ಷ ಸಂಬಳ, ಸನ್ಮಾನ

ವಿಶ್ವದ ಅತಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ರೋಲ್ಸ್-ರಾಯ್ಸ್‌ನಲ್ಲಿ ಉದ್ಯೋಗ ಪಡೆದ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಮಂಗಳೂರಿನ ರಿತುಪರ್ಣ ಭಾಜನರಾಗಿದ್ದಾರೆ.