
ಶಿವಮೊಗ್ಗ: “ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿಯೇ ಸಾಯುತ್ತೇನೆ” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪ ಮಾತನಾಡಿ, “ಡಿಕೆಶಿಯ ಈ ಹೇಳಿಕೆ ಯುವಜನತೆಗೆ ಸ್ಫೂರ್ತಿ ನೀಡುವಂತಿದೆ. ಗಾಂಧೀಜಿ ಹುತಾತ್ಮರಾಗುವ ವೇಳೆ ‘ಹೇ ರಾಮ್’ ಎಂದರು. ಅದು ಡಿಕೆಶಿಗೆ ಸ್ಫೂರ್ತಿ ನೀಡಿರಬಹುದು” ಎಂದರು.
“ಶಿವರಾತ್ರಿ ಕಾರ್ಯಕ್ರಮಕ್ಕೆ ಸದ್ಗುರು ಅವರ ಆಹ್ವಾನಕ್ಕೆ ಡಿಕೆಶಿ ಹೋಗಿರುವುದರಲ್ಲಿ ತಪ್ಪೇನೂ ಇಲ್ಲ. ಅಷ್ಟೇ ಅಲ್ಲ, ಆರೆಸ್ಸೆಸ್‌ನ ವಿಜಯದಶಮಿ ಉತ್ಸವಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡಾ ಹೋಗಿದ್ದರು” ಎಂದು ಈಶ್ವರಪ್ಪ ಉದಾಹರಣೆ ನೀಡಿದರು.
“ಕಾಂಗ್ರೆಸ್ ನಾಯಕರಿಗೂ ಹಿಂದೂ ಧರ್ಮದ ಮೇಲೆ ಒಲವಿದೆ, ಆದರೆ ಅದನ್ನು ಹೇಳುವ ಧೈರ್ಯ ಇಲ್ಲ” ಎಂದು ಟೀಕಿಸಿದ ಅವರು, “ನಾನು ಜೀವನದಲ್ಲಿ ಮೊದಲ ಬಾರಿ ಡಿಕೆಶಿಯನ್ನು ಹೊಗಳುತ್ತಿದ್ದೇನೆ. ಅವರ ಮಾತು ಸ್ವಾತಂತ್ರ್ಯ ಪೂರ್ವದ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಇದೇ ವೇಳೆ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, “ನಾನು ಇಂದು ಈ ಸ್ಥಾನಕ್ಕೆ ಬರುವುದಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ಆರೆಸ್ಸೆಸ್ ಕಾರಣ. ಅದನ್ನು ನಾನು ಎಂದಿಗೂ ಮರೆಯಲಾರೆ” ಎಂದು ಭಾವುಕತೆ ವ್ಯಕ್ತಪಡಿಸಿದರು.