
ಬೆಂಗಳೂರು: ತಾನು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ಜನರ ಸೇವೆ ಮಾಡಲು ಮಾತ್ರ ರಾಜಕಾರಣದಲ್ಲಿ ಹಗಲು ರಾತ್ರಿ ತಿರುಗುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಲಾಲ್ ಬಾಗ್ ಉದ್ಯಾನದಲ್ಲಿ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಹುದ್ದೆಯ ಕುರಿತಂತೆ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ತೀವ್ರವಾಗಿ ಖಂಡಿಸಿದರು.
ಮಾಧ್ಯಮಗಳ ವಿರುದ್ಧ ಡಿಕೆಶಿ ಗರಂ
“ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ‘ನೀವು ಮುಖ್ಯಮಂತ್ರಿ ಆಗಬೇಕು, ಆ ಸಮಯ ಹತ್ತಿರ ಬರುತ್ತಿದೆಯೇ’ ಎಂದು ಕೇಳಿದರು. ಆದರೆ, ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ತಿದ್ದಿ ಪ್ರಸಾರ ಮಾಡುತ್ತಿವೆ” ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿ ತಿರುಚಿದ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಸಿಎಂ, “ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ಕರೆಯುವುದೂ ಇಲ್ಲ” ಎಂದು ತಿಳಿಸಿದರು.
“ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ” ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.