
ಭಿವಾನಿ (ಹರಿಯಾಣ) : ಹರಿಯಾಣದ ಭಿವಾನಿಯಲ್ಲಿ ಅನೈತಿಕ ಸಂಬಂಧವೊಂದಕ್ಕೆ ಅಡ್ಡಿಯಾದ ಕಾರಣ ಪತಿಯೊಬ್ಬನು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನಿಂದ ಹತ್ಯೆಗೆ ಒಳಗಾದ ದಾರುಣ ಘಟನೆ ಬೆಳಕಿಗೆ ಬಂದಿದೆ. ಪತ್ನಿ ರವೀನಾ ಹಾಗೂ ಆಕೆಯ ಪ್ರೇಮಿ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಮೃತ ವ್ಯಕ್ತಿ ಪ್ರವೀಣ್ (ವಯಸ್ಸು 30) ಯೂಟ್ಯೂಬರ್ ರವೀನಾಳ ಪತಿ. ಇಬ್ಬರೂ 2017 ರಲ್ಲಿ ವಿವಾಹವಾಗಿದ್ದು, ಇವರಿಗೆ ಆರು ವರ್ಷದ ಮಗನೊಬ್ಬನಿದ್ದಾನೆ.
ಮಾರ್ಚ್ 25 ರಂದು ಪ್ರವೀಣ್ ತಡರಾತ್ರಿ ಮನೆಗೆ ಬಂದಾಗ, ಪತ್ನಿ ರವೀನಾ ಮತ್ತು ಆಕೆಯ ಪ್ರಿಯಕರ ಸುರೇಶ್ ಅಸಭ್ಯ ಭಂಗಿಯಲ್ಲಿ ಇರುವುದು ಕಂಡು ಬಂದು, ತೀವ್ರ ಜಗಳ ಸಂಭವಿಸಿದೆ. ಈ ಸಂದರ್ಭ, ಇಬ್ಬರೂ ಸೇರಿ ಪ್ರವೀಣ್‌ನನ್ನು ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.
ಕೊಲೆಯ ನಂತರ ಶವವನ್ನು ಬೈಕ್‌ನಲ್ಲಿ ಸಾಗಿಸಿ ನಗರದ ಹೊರವಲಯದ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾಹಿತಿ ತನಿಖೆಯ ವೇಳೆ ಸಿಕ್ಕಿದೆ. ಪ್ರಕರಣ ಬಯಲಿಗೆ ಬಂದ ಬಳಿಕ ಇಬ್ಬರನ್ನೂ ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಪಡೆಯಲಾಗಿದೆ.
ರವೀನಾ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಹಿಸಾರ್ ಮೂಲದ ಯೂಟ್ಯೂಬರ್ ಸುರೇಶ್ ಜೊತೆ ಇನ್‌ಸ್ಟಾಗ್ರಾಂ ಮುಖಾಂತರ ಪರಿಚಯವಾಗಿತ್ತು. ಈ ಸಂಬಂಧ ನಿಧಾನವಾಗಿ ಪ್ರೀತಿಗೆ ತಿರುಗಿದ್ದು, ಪ್ರವೀಣ್ ಇದನ್ನು ಪ್ರಶ್ನಿಸುತ್ತಿದ್ದಂತೆ ಜಗಳಗಳು ಹೆಚ್ಚಾಗಿದ್ದವು. ಸಾಮಾಜಿಕ ಮಾಧ್ಯಮದಲ್ಲಿ ರವೀನಾ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳ ಬಗ್ಗೆ ಪ್ರವೀಣ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಎಂಬುದೂ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ತನಿಖೆ ಮುಂದುವರಿಸುತ್ತಿದ್ದು, ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬಹಿರಂಗವಾಗುವ ನಿರೀಕ್ಷೆ ಇದೆ.