
ಬೆಳ್ತಂಗಡಿ: ಮಹಾ ಶಿವರಾತ್ರಿಯ ಪವಿತ್ರ ದಿನ ಶಿವನ ಜಾಗರಣೆಯು ಭಕ್ತರಲ್ಲಿ ಭಕ್ತಿಭಾವವನ್ನು ಉಂಟುಮಾಡುತ್ತದೆ. ಸಮುದ್ರಮಂಥನದಲ್ಲಿ ಎಲ್ಲರೂ ಉತ್ತಮ ವಸ್ತುಗಳನ್ನು ಸ್ವೀಕರಿಸಿದರೆ, ಶಿವನು ಮಾತ್ರ ವಿಷವನ್ನು ಸೇವಿಸಿ ಲೋಕ ರಕ್ಷಿಸಿದನು. ಆದ್ದರಿಂದ ಶಿವನ ಆರಾಧನೆ ಅಪಾರ ಮಹತ್ವದ್ದಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಫೆಬ್ರವರಿ 26ರಂದು ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಮುಂಭಾಗದಲ್ಲಿ ಸ್ಥಾಪಿತವಾದ ಭಾರಿ ಗಾತ್ರದ ಘಂಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಘಂಟೆಯನ್ನು ಬೆಂಗಳೂರಿನ ಉದ್ಯಮಿ ದಿನೇಶ್ ಹಾಗೂ ಅವರ ಪತ್ನಿ ಸುನೀತಾ ದಾನವಾಗಿ ನೀಡಿದ್ದು, “ನಾನಿನ್ನೂ ಚಿಕ್ಕವಯಸ್ಸಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದೇನೆ. ದೇವಳಕ್ಕೆ ಕೊಡುಗೆ ನೀಡಬೇಕೆಂಬ ಆಶಯದಿಂದ ಈ ಘಂಟೆಯನ್ನು ಅರ್ಪಿಸಿದ್ದೇನೆ. ಮಹಾ ಶಿವರಾತ್ರಿಯಂದು ಇದರ ಉದ್ಘಾಟನೆಯಾಗಿರುವುದು ನನಗೆ ತುಂಬಾ ಸಂತೋಷ ನೀಡಿದೆ ” ಎಂದು ಹೇಳಿದರು.
ಈ ಸಮಾರಂಭದಲ್ಲಿ ಉದ್ಯಮಿ ಪ್ರಸಾದ್, ರವೀಂದ್ರ, ವಿಜಯ್ ಕುಮಾರ್, ಪತ್ನಿ ಸುನೀತಾ, ಧರ್ಮಸ್ಥಳದ ಎ. ವೀರು ಶೆಟ್ಟಿ ಹಾಗೂ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಘಂಟೆಯ ಪ್ರಮುಖ ವಿಶೇಷತೆಗಳು:
ತೂಕ: 5 ಕ್ವಿಂಟಾಲ್
ಒಟ್ಟು ವೆಚ್ಚ: ₹10 ಲಕ್ಷ
ನಿರ್ಮಾಣ: 20 ದಿನಗಳಲ್ಲಿ ,ಲಕ್ನೋದಲ್ಲಿ
ವೈಶಿಷ್ಟ್ಯ: ಕಲ್ಲಿನ ವೃತ್ತ ಹಾಗೂ ಕಂಬದೊಂದಿಗೆ ಜೋಡಣೆ