
ಹುಬ್ಬಳ್ಳಿ: ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ್ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಹುಬ್ಬಳ್ಳಿಯ ಹಿಂದೂ ಮುಖಂಡ ಸುರೇಶ್ ಗೌಡ ಅವರು ದೂರು ದಾಖಲಿಸಿದ್ದು, ಮಟ್ಟಣ್ಣವರ್ ಅವರು ಮಾನವ ಹಕ್ಕುಗಳ ಆಯೋಗದ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಗಿರೀಶ್ ಮಟ್ಟಣ್ಣವರ್ ಅವರು ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾತನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿಯಂತೆ ಧರ್ಮಸ್ಥಳ ಪೊಲೀಸರಿಗೆ ಪರಿಚಯಿಸಿದ್ದಾರೆ. ಈ ಮೂಲಕ ಇಲಾಖೆಯ ಹೆಸರನ್ನು ಬಳಸಿಕೊಂಡು ಸುಳ್ಳು ಹೇಳಿಕೆ ನೀಡಿದ್ದಾರೆ ಮತ್ತು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ. ಈ ರೀತಿಯ ಸುಳ್ಳು ಮಾಹಿತಿ ನೀಡಿರುವ ಗಿರೀಶ್ ಮಟ್ಟಣ್ಣವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ತನಿಖೆ ಈಗಾಗಲೇ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ಹೆಸರನ್ನು ಬಳಸಿಕೊಂಡು ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಬಗ್ಗೆ ಮಾನವ ಹಕ್ಕುಗಳ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.